ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ: ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಜು. 12: ‘ಸಂವಿಧಾನಕ್ಕೆ ಯಾವುದೇ ಕಾರಣಕ್ಕೂ ಅಪಚಾರ ಮಾಡುವುದಿಲ್ಲ. ಅಲ್ಲದೆ, ಶಾಸಕರ ರಾಜೀನಾಮೆ ವಿಚಾರದಲ್ಲಿ ನಾನು ಯಾರ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ತೇಜೋವಧೆ ಮಾಡುತ್ತಿದ್ದಾರೆ, ಮಾಡಲಿ. ಅವರಿಗೆ ಒಳ್ಳೆಯದಾಗಲಿ. ದೇಶದ ಶಾಸಕಾಂಗ ಮತ್ತು ನ್ಯಾಯಾಂಗ ವ್ಯವಸ್ಥೆ ಉಳಿಯಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಂವಿಧಾನಾತ್ಮಕವಾಗಿ ನೇಮಕವಾದ ಒಬ್ಬ ಪ್ರತಿನಿಧಿಯಾಗಿ ಪ್ರಜಾಪ್ರಭುತ್ವದ ಘನತೆಗೆ ಕುಂದು ಬಾರದ ರೀತಿಯಲ್ಲಿ ಕೆಲಸ ಮಾಡುವುದು ನನ್ನ ಹೊಣೆ. ಜನರ ಮನಸ್ಸಿಗೆ ನೋವಿಗೆ ಗೌರವ ಕೊಟ್ಟು ನನ್ನ ಕರ್ತವ್ಯದಿಂದ ವಿಮುಖನಾಗದಂತೆ ನಿರ್ವಹಿಸುವುದು ಜವಾಬ್ದಾರಿ ಎಂದು ರಮೇಶ್ ಕುಮಾರ್ ಹೇಳಿದರು.
ಯಾರನ್ನಾದರೂ ಖುಷಿ ಅಥವಾ ಸಂತೋಷ ಪಡಿಸಲು ನಾವು ನೃತ್ಯ ಮಾಡಲು ನೃತ್ಯಗಾರ್ತಿಯಲ್ಲ. ಸಂವಿಧಾನಾತ್ಮಕವಾಗಿ ನೇಮಕವಾದ ಒಬ್ಬ ಪ್ರತಿನಿಧಿ. ಯಾರೂ ಬೇಕಾದರೂ ಒತ್ತಡ ಹಾಕಲಿ. ನನ್ನ ಕೆಲಸ ನಾನು ಮಾಡುತ್ತೇನೆ. ಗಾಂಧೀಜಿಯವರನ್ನೇ ಕೊಂದ ದೇಶ ಇದು. ಅವರನ್ನು ನಮಸ್ಕರಿಸಿ ಕೊಂದರು. ಆದರೆ, ಗಾಂಧೀಜಿಯವರ ತತ್ವಾದರ್ಶಗಳು ಸತ್ತಿವೆಯೇ ಎಂದು ರಮೇಶ್ ಕುಮಾರ್ ಇದೇ ವೇಳೆ ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ಕೈಗೊಳ್ಳುವ ತೀರ್ಮಾನ ನಮಗೆ ಅನ್ವಯವಾಗುತ್ತದೋ ಇಲ್ಲವೋ, ನೋಡಬೇಕು. ಕೋರ್ಟ್ ಆದೇಶ ಮಾಡಿದರೆ ಅವರನ್ನೇ ಮಾಹಿತಿ ಕೇಳಬೇಕು ಎಂದ ಅವರು, ಕ್ರಮಬದ್ಧ ರೂಪದಲ್ಲಿ ಶಾಸಕರು ನಿನ್ನೆ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.







