ಮೂವರು ಮಾಜಿ ಕಾಂಗ್ರೆಸ್,ಓರ್ವ ಬಿಜೆಪಿ ಶಾಸಕ ಗೋವಾ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ

ಪಣಜಿ,ಜು.12: ಇತ್ತೀಚಿಗಷ್ಟೇ ಆಡಳಿತ ಬಿಜೆಪಿಗೆ ಸೇರ್ಪಡೆಗೊಂಡಿರುವ ಮೂವರು ಕಾಂಗ್ರೆಸ್ ಬಂಡಾಯಶಾಸಕರು ಸೇರಿದಂತೆ ನಾಲ್ವರು ಗೋವಾ ಶಾಸಕರು ಶನಿವಾರ ರಾಜ್ಯ ಸಂಪುಟವನ್ನು ಸೇರಲಿದ್ದಾರೆ ಎಂದು ಬಿಜೆಪಿಯಲ್ಲಿನ ಮೂಲಗಳು ಶುಕ್ರವಾರ ಸುದ್ದಿಸಂಸ್ಥೆಗೆ ತಿಳಿಸಿದವು.
ಗೋವಾ ವಿಧಾನಸಭೆಯ 15 ಕಾಂಗ್ರೆಸ್ ಶಾಸಕರ ಪೈಕಿ 10 ಜನರು ವಿಪಕ್ಷ ನಾಯಕ ಚಂದ್ರಕಾಂತ ಕವಳೇಕರ್ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಂದಿಗೆ ಗುರುವಾರ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದ ಈ ಶಾಸಕರು ಶುಕ್ರವಾರ ಗೋವಾಕ್ಕೆ ವಾಪಸಾಗಿದ್ದಾರೆ.
ಮೂವರು ಮಾಜಿ ಕಾಂಗ್ರೆಸ್ ಶಾಸಕರು ಮತ್ತು ವಿಧಾನಸಭೆಯ ಉಪ ಸ್ಪೀಕರ್ ಮೈಕಲ್ ಲೋಬೊ ಅವರು ಶನಿವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕರೋರ್ವರು ತಿಳಿಸಿದರು. ಆದರೆ ಸಚಿವ ಸ್ಥಾನ ಪಡೆಯಲಿರುವ ಮಾಜಿ ಕಾಂಗ್ರೆಸಿಗರ ಹೆಸರುಗಳನ್ನು ಅವರು ಬಹಿರಂಗಗೊಳಿಸಲಿಲ್ಲ.
10 ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೇರುವಂತೆ ಮನವೊಲಿಸುವಲ್ಲಿ ಲೋಬೊ ಪ್ರಮುಖ ಪಾತ್ರ ವಹಿಸಿದ್ದರು. ಇದರೊಂದಿಗೆ 40 ಸದಸ್ಯಬಲದ ರಾಜ್ಯ ವಿಧಾನಭೆಯಲ್ಲಿ ಬಿಜೆಪಿಗೆ ಭಾರೀ ಬಹುಮತ ದೊರಕಿದೆ.
ಸಂಪುಟದಲ್ಲಿ ನೂತನ ಸಚಿವರಿಗೆ ಸ್ಥಾನ ಕಲ್ಪಿಸಲು ಸಾವಂತ್ ಅವರು ನಾಲ್ವರು ಸಚಿವರನ್ನು ಕೈಬಿಡಲಿದ್ದು,ಈ ಪೈಕಿ ಹೆಚ್ಚಿನವರು ಮಿತ್ರಪಕ್ಷಗಳಿಗೆ ಸೇರಿದವರಾಗಿದ್ದಾರೆ ಎಂದು ಮೂಲಗಳು ತಿಳಿಸಿದವು.
ಸಾವಂತ್ ಅವರು ಹಾಲಿ ದಿಲ್ಲಿಯಲ್ಲಿದ್ದು,ಅಲ್ಲಿಂದ ರಾಜ್ಯಕ್ಕೆ ಮರಳಿದ ಬಳಿಕ ಸಂಪುಟದಲ್ಲಿಯ ಮಿತ್ರಪಕ್ಷಗಳ ಸಚಿವರ ಬಗ್ಗೆ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.
ಆದರೆ ಮಿತ್ರಪಕ್ಷ ಜಿಎಫ್‌ಪಿಗೆ ಸೇರಿದ ಮೂವರು ಸಚಿವರಾದ ಪಕ್ಷದ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ವಿಜಯ ಸರದೇಸಾಯಿ,ವಿನೋದ ಪಾಳ್ಯೆಕರ್ ಮತ್ತು ಜಯೇಶ ಸಲಗಾಂವಕರ್ ಹಾಗೂ ಪಕ್ಷೇತರ ಶಾಸಕ ಮತ್ತು ಕಂದಾಯ ಸಚಿವ ರೋಹನ ಖುಂಠೆ ಅವರನ್ನು ಕೈಬಿಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿದವು.
2017,ಫೆಬ್ರವರಿಯಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾದಾಗಿನಿಂದಲೂ ಜಿಎಫ್‌ಪಿ ಅದರ ಅಂಗವಾಗಿದೆ.







