ಕರ್ಣಾಟಕ ಬ್ಯಾಂಕ್‌ಗೆ ದಾಖಲೆಯ 175 ಕೋಟಿ ರೂ. ತ್ರೈಮಾಸಿಕ ಲಾಭ

ಮಂಗಳೂರು, ಜು.12: ಕರ್ಣಾಟಕ ಬ್ಯಾಂಕ್ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ಶೇ.7.46 ಅಭಿವೃದ್ಧಿಯೊಂದಿಗೆ ಸಾರ್ವಕಾಲಿಕ ದಾಖಲೆಯ 175.42 ಕೋಟಿ ರೂ. ನಿವ್ವಳ ಲಾಭವನ್ನು ಘೋಷಿಸಿದೆ. ಬ್ಯಾಂಕ್‌ನ ಕಳೆದ ವರ್ಷದ ಇದೇ ಅವಧಿಯಲ್ಲಿ 163.24 ಕೋಟಿ ರೂ. ಲಾಭವನ್ನು ದಾಖಲಿಸಿತ್ತು.
ನಗರದ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಮಾರೋಪ ಸಭೆಯಲ್ಲಿ ವಿತ್ತೀಯ ವರ್ಷ 2019ರ ಮೊದಲ ತ್ರೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.
ಬ್ಯಾಂಕ್‌ನ ಒಟ್ಟು ವ್ಯವಹಾರವು ಜೂ.30ರ ಅಂತ್ಯಕ್ಕೆ 1,21,339.52 ಕೋಟಿ ರೂ. ತಲುಪಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ.9.85ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕ್‌ನ ಠೇವಣಿಗಳ ಮೊತ್ತವು 62,275 ಕೋಟಿಗಳಿಂದ 68,520.72 ಕೋಟಿಗೆ ತಲುಪಿದೆ. ವಾರ್ಷಿಕ ಶೇ.9.24ರ ಬೆಳವಣಿಗೆಯನ್ನು ಸಾಧಿಸಿದೆ. ಬ್ಯಾಂಕ್‌ನ ಮುಂಗಡಗಳು 47,731 ಕೋಟಿಗಳಿಂದ 52,818.80 ಕೋಟಿ ರೂ.ನ್ನು ತಲುಪಿ, ಶೇ.10.66ರ ವೃದ್ಧಿಯನ್ನು ದಾಖಲಿಸಿದೆ.
ಬ್ಯಾಂಕ್‌ನ ಸಿ.ಡಿ.(ಮುಂಗಡ ಮತ್ತು ಠೇವಣಿ) ಅನುಪಾತ ಉತ್ತಮಗೊಂಡಿದ್ದು, ಶೇ.77.08ರಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಿ.ಡಿ. ಅನುಪಾತವು ಶೇ.76.10 ಆಗಿತ್ತು. ಪ್ರಸಕ್ತ ಸಾಲಿನ ಮೊದಲ ತ್ರೈಮಾಸಾಂತ್ಯಕ್ಕೆ (ಕ್ಯೂ1ಎಫ್‌ವೈ 2019-20) ಬ್ಯಾಂಕ್‌ನ ಸ್ಥೂಲ ಅನುತ್ಪಾದಕ ಆಸ್ತಿಗಳು ಇಳಿಕೆ ಕಂಡಿದ್ದು, ಜಿಎನ್‌ಪಿಎ ಶೇ.4.55ರಷ್ಟಿವೆ. ಅದು ಹಿಂದಿನ ವರ್ಷದ ಇದೇ ಸಾಲಿನಲ್ಲಿ ಅಂದರೆ 2018ರ ಜೂ.30ರಲ್ಲಿ ಶೇ.4.72 ಆಗಿತ್ತು.
ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದ ಫಲಿತಾಂಶದ ಬಗ್ಗೆ ಮಾತನಾಡಿದ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್., ನಾವು ನವ ವಿತ್ತೀಯ ವರ್ಷದ ವಹಿವಾಟನ್ನು ಸರ್ವಾಧಿಕ ದಾಖಲೆಯ ನಿವ್ವಳ ಲಾಭವನ್ನು ಘೋಷಿಸುವುದ ರೊಂದಿಗೆ ಶುಭಾರಂಭಗೊಳಿಸಿದ್ದೇವೆ ಎಂದು ತಿಳಿಸಿದರು.
ಈ ಸಾಧನೆಯ ವೇಗವನ್ನು ಮುಂಬರುವ ದಿನಗಳಲ್ಲೂ ಕಾಯ್ದುಕೊಳ್ಳುವ ವಿಶ್ವಾಸವನ್ನು ಹೊಂದಿದ್ದೇವೆ. ಮಾರುಕಟ್ಟೆಯಲ್ಲಿನ ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆಯೂ ಈ ಸಾಧನೆ ಗಮನಾರ್ಹವಾದುದು ಎಂದರು.
ದೂರದೃಷ್ಟಿಯನ್ನು ಹೊಂದಿದ ನಮ್ಮ ವಿನೂತನವಾದ ಬ್ಯಾಂಕಿಂಗ್ ಸೌಲಭ್ಯಗಳ ವಿತರಣಾ ವ್ಯವಸ್ಥೆ ಹಾಗೂ ಮಾನವ ಸಂಪನ್ಮೂಲಗಳ ಅಭಿವೃದ್ಧಿಯಂತಹ ಕ್ರಮಗಳು ಈಗ ಫಲ ನೀಡಲಾರಂಭಿಸಿವೆ. ಮುಂಬರುವ ದಿನಗಳಲ್ಲಿ ಬ್ಯಾಂಕ್ ಮತ್ತಷ್ಟು ಉತ್ತಮವಾಗಿ ಬೆಳೆದು ಸದೃಢವಾಗಿ ಹೊರಹೊಮ್ಮಲಿದೆ. ಅಭಿವೃದ್ಧಿಯ ಹೊಸ ಮೈಲುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮತ್ತಷ್ಟು ಶ್ರಮಿಸಲು ಕಟಿಬದ್ಧರಾಗಿದ್ದೇವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







