ಭಾರತದಲ್ಲಿರುವ ವೈದ್ಯರ ಸಂಖ್ಯೆ 19.47 ಲಕ್ಷಕ್ಕೂ ಅಧಿಕ: ಸರಕಾರ

ಹೊಸದಿಲ್ಲಿ,ಜು.12: ಈ ವರ್ಷದ ಮಾರ್ಚ್ ಅಂತ್ಯಕ್ಕೆ ಇದ್ದಂತೆ ದೇಶದಲ್ಲಿ ಅಲೋಪತಿ,ಆಯುರ್ವೇದ,ಯುನಾನಿ ಮತ್ತು ಹೋಮಿಯೊಪತಿ ಸೇರಿದಂತೆ 19,47,309 ವೈದ್ಯರಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ ಅವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
ಈ ಪೈಕಿ 11,59,309 ಅಲೋಪತಿ ವೈದ್ಯರು ರಾಜ್ಯ ವೈದ್ಯಕೀಯ ಮಂಡಳಿಗಳು/ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಶೇ.80ರಷ್ಟು ಲಭ್ಯತೆಯನ್ನು ಪರಿಗಣಿಸಿದರೆ ಸುಮಾರು 9.27 ಲಕ್ಷ ಅಲೋಪತಿ ವೈದ್ಯರು ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಿನ ಅಂದಾಜು 135 ಕೋ.ಜನಸಂಖ್ಯೆಗೆ ವೈದ್ಯರು-ಜನಸಂಖ್ಯೆ ಅನುಪಾತ 1:1456ರಷ್ಟಿದೆ. ಇದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್‌ಒ)ಯು ನಿಗದಿಗೊಳಿಸಿರುವ 1:1000ಕ್ಕಿಂತ ಕಡಿಮೆಯಾಗಿದೆ ಎಂದರು.
7.88 ಲಕ್ಷ ಆಯುರ್ವೇದ,ಯುನಾನಿ ಮತ್ತು ಹೋಮಿಯೊಪತಿ ವೈದ್ಯರಿದ್ದು,ಶೇ.80ರಷ್ಟು ಲಭ್ಯತೆಯನ್ನು ಪರಿಗಣಿಸಿದರೆ ಸುಮಾರು 6.30 ಲ.ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ವರ್ಗ ಮತ್ತು ಅಲೋಪತಿ ವರ್ಗವನ್ನು ಒಟ್ಟಾಗಿ ಪರಿಗಣಿಸಿದರೆ ವೈದ್ಯರು-ಜನಸಂಖ್ಯೆ ಅನುಪಾತ 1:867ರಷ್ಟಾಗುತ್ತದೆ ಮತ್ತು ಇದು ಡಬ್ಲುಎಚ್‌ಒದ ಮಾನದಂಡಕ್ಕಿಂತ ಹೆಚ್ಚಾಗಿದೆ ಎಂದು ಹರ್ಷವರ್ಧನ ತಿಳಿಸಿದರು.