ಬೆಳಗ್ಗೆ ಎಚ್ಚರವಾಗಲು ಅಲಾರ್ಮ್ ಇಡುತ್ತೀರಾ ?: ಹಾಗಾದರೆ ಈ ಅಪಾಯದ ಬಗ್ಗೆ ಎಚ್ಚರವಿರಲಿ…
ಬೆಳಗಿನ ನಿಮ್ಮ ದಿನಚರಿಯನ್ನೊಮ್ಮೆ ಹಾಗೇ ನೆನಪಿಸಿಕೊಳ್ಳಿ. ಬೆಳಿಗ್ಗೆ ಆರೋ ಏಳೋ ಗಂಟೆಗೆ ನಿಮ್ಮ ಪಕ್ಕದಲ್ಲಿರುವ ಮೊಬೈಲ್ ಫೋನ್ ನಿಮ್ಮನ್ನು ಎಚ್ಚರಿಸಲು ಅಲಾರ್ಮ್ ಶಬ್ದವನ್ನು ಮೊಳಗಿಸುತ್ತದೆ. ಈಗ ನೀವೇನು ಮಾಡುತ್ತೀರಿ? ನಿಮ್ಮ ಮೊಬೈಲ್‌ನಲ್ಲಿ ಅಲಾರ್ಮ್ ಶಬ್ದ ಮೊಳಗುತ್ತಿದ್ದಾಗ ಸ್ನೂಝ್ ಎಂಬ ಚೆಂದದ ಆಯ್ಕೆಯೊಂದು ಕಾಣಿಸಿಕೊಳ್ಳುತ್ತದೆ. ಈ ಸ್ನೂಝ್ ಬಟನ್ ಒತ್ತಿದಾಗ ಅಲಾರ್ಮ್ ಸ್ತಬ್ಧಗೊಳ್ಳುತ್ತದೆ ಮತ್ತು ಹತ್ತು ನಿಮಿಷಗಳ ಬಳಿಕ ಮತ್ತೆ ಮೊಳಗುತ್ತದೆ.
ನೀವು ಮಾತ್ರವೇನು,ಹೆಚ್ಚಿನ ಎಲ್ಲರೂ ಒಂದು ಬಾರಿಗೆ ಅಲಾರ್ಮ್ ಶಬ್ಧವಾದಾಗ ಹಾಸಿಗೆಯಿಂದ ಏಳುವ ಬದಲು ಸ್ನೂಝ್ ಬಟನ್ ಒತ್ತಿ ಮತ್ತೆ ಹಾಯಾಗಿ ಮಲಗುತ್ತಾರೆ. ಏಕೆಂದರೆ ನಿಮಗೆ ನಿದ್ರೆ ಎಂದೂ ಸಾಕಾಗುವುದಿಲ್ಲ ಮತ್ತು ಬೆಳಿಗ್ಗೆ ಇನ್ನೊಂದು ಹತ್ತು ನಿಮಿಷ ಮಲಗೋಣ ಎಂದೇ ಅನಿಸುತ್ತದೆ. ಆದರೆ ಅಲಾರ್ಮ್ ಮೊಳಗಿದಾಗಲೆಲ್ಲ ಸ್ನೂಝ್ ಬಟನ್‌ನ್ನು ಒತ್ತುತ್ತಲೇ ಇರುತ್ತೀರಿ. ಸ್ನೂಝ್ ಎಂದರೆ ಕಿರುನಿದ್ರೆ ಎಂದರ್ಥ. ಸ್ನೂಝಿಂಗ್ ಅಥವಾ ಅಲಾರ್ಮ್‌ನ ಸ್ನೂಝ್ ಬಟನ್ ಒತ್ತಿದಾಗ ಅದು ನೀವು ಮತ್ತೆ ಹತ್ತು ನಿಮಿಷದ ಕಿರುನಿದ್ರೆ ಮಾಡಲು ಅವಕಾಶ ನೀಡುತ್ತದೆ. ಆದರೆ ನಿಮ್ಮ ಗಮನದಲ್ಲಿರಲಿ,ಈ ಅಭ್ಯಾಸ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
►ಸ್ನೂಝಿಂಗ್ ಏಕೆ ಅಪಾಯಕಾರಿ?
ನೀವು ನಿದ್ರೆಯಲ್ಲಿರುವಾಗ ನಿಮ್ಮ ಶರೀರವು ಸಂಪೂರ್ಣ ವಿಶ್ರಾಂತಿಯಲ್ಲಿರುತ್ತದೆ. ವಾಸ್ತವದಲ್ಲಿ ಅದು ಸಂಪೂರ್ಣ ನಿಷ್ಕ್ರಿಯಗೊಂಡ ಅಥವಾ ಕೋಮಾಕ್ಕಿಂತ ಕೆಳಗಿನ ಮಜಲಿನ ಸ್ಥಿತಿಯಲ್ಲಿರುತ್ತದೆ. ಹೀಗಾಗಿ ಹಠಾತ್ತನೆ ಏಳಬಾರದು. ಅದು ಹೃದಯ ಬಡಿತದಲ್ಲಿ ಹೆಚ್ಚಳ,ಹೃದಯಾಘಾತದ ಹೆಚ್ಚಿನ ಅಪಾಯ,ದಿಢೀರ್ ಆಘಾತ,ಶರೀರದಲ್ಲಿ ತೀವ್ರ ನೋವು ಮತ್ತು ಮೈಗ್ರೇನ್‌ಗೆ ಕಾರಣವಾಗಬಹುದು. ನಿದ್ರೆಯಿಂದ ಏಳಲು ಮತ್ತು ಸಹಜ ಉಷ್ಣತೆಯನ್ನು ಪಡೆದುಕೊಳ್ಳಲು ಶರೀರಕ್ಕೆ ಕೊಂಚ ಸಮಯಾವಕಾಶದ ಅಗತ್ಯವಿರುತ್ತದೆ. ನೀವು ಸ್ನೂಝಿಂಗ್ ಬಟನ್ ಅದುಮುತ್ತಲೇ ಇದ್ದರೆ ಶರೀರವು ಅದನ್ನು ‘ಸುಳ್ಳು ಅಲಾರ್ಮ್ ’ಎಂದು ಭಾವಿಸುತ್ತದೆ ಮತ್ತು ನಿಮ್ಮನ್ನು ಮರಳಿ ನಿದ್ರೆಯ ಉಷ್ಣತೆಗೆ ಒಯ್ಯುತ್ತದೆ. ಅಲಾರ್ಮ್ ಮತ್ತೆ ಸದ್ದು ಮಾಡಿದಾಗ ಶರೀರಕ್ಕೆ ಅಚ್ಚರಿಯಾಗುತ್ತದೆ ಮತ್ತು ಇದು ಸ್ಲೀಪ್ ಇನರ್ಶಿಯಾ ಅಥವಾ ನಿದ್ರೆಯ ಜಡತ್ವ ಎಂದು ಕರೆಯಲಾಗುವ ಕಿರಿಕಿರಿಯ ಭಾವವನ್ನು ಉಂಟು ಮಾಡುತ್ತದೆ. ಸರಣಿ ಇಲ್ಲಿಂದ ಮುಂದುವರಿಯುತ್ತದೆ,ನೀವು ಸ್ನೂಝ್ ಬಟನ್‌ನ್ನು ಹೆಚ್ಚೆಚ್ಚು ಒತ್ತುತ್ತಲೇ ಹೋಗುತ್ತಿದ್ದರೆ ನಿಮ್ಮ ಶರೀರದ ಗೊಂದಲವೂ ಹೆಚ್ಚುತ್ತದೆ ಮತ್ತು ಸ್ಲೀಪ್ ಇನರ್ಶಿಯಾ ದಿನವಿಡೀ ಮುಂದುವರಿಯುತ್ತದೆ.
►ವಾಡಿಕೆ ಏಕೆ ಮುಖ್ಯ?
ಅಲಾರ್ಮ್‌ನ್ನು ಬೆಳಿಗ್ಗೆ ಆರು ಗಂಟೆಗೆ ಇಡುವುದು ಮತ್ತು ಏಳು ಗಂಟೆಗೆ ಏಳುವುದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಕಾರವಾಗಿದೆ. ನಿಮ್ಮ ಅಲಾರ್ಮ್ ಗಡಿಯಾರದಂತೆ ನಿಮ್ಮೊಳಗೂ ಜೈವಿಕ ಗಡಿಯಾರವು ಇರುತ್ತದೆ ಮತ್ತು ಶರೀರಕ್ಕಾಗಿ ಸಮಯಗಳನ್ನು ನಿಗದಿಗೊಳಿಸುತ್ತದೆ. ಈ ವೇಳಾಪಟ್ಟಿ ನೀವು ಯಾವಾಗ ಮಲಗಬೇಕು ಮತ್ತು ಯಾವಾಗ ಏಳಬೇಕು ಎನ್ನುವುದನ್ನು ನಿಮಗೆ ಸೂಚಿಸುತ್ತದೆ. ಉದಾಹರಣೆಗೆ ನಿಮ್ಮ ಹೆತ್ತವರು ಅಥವಾ ಅಜ್ಜಿ-ಅಜ್ಜಿ ಯಾವುದೇ ಅಲಾರ್ಮ್ ಇಲ್ಲದೇ ಬೆಳಗಿನ ಜಾವವೇ ಏಳುವುದನ್ನು ನೀವು ನೋಡುತ್ತಿರಬಹುದು. ಈ ದೈನಂದಿನ ವಾಡಿಕೆಯನ್ನೇ ಜೈವಿಕ ಗಡಿಯಾರ ಎನ್ನಲಾಗುತ್ತದೆ. ಹೀಗಾಗಿ ಇಂತಹ ವಾಡಿಕೆಯನ್ನು ರೂಢಿಸಿಕೊಂಡು ನೀವು ನಿದ್ರೆಗೆ ಜಾರುವ ಮತ್ತು ಏಳುವ ಸಮಯವನ್ನು ನಿಗದಿ ಮಾಡಿಕೊಳ್ಳುವುದು ಒಳ್ಳೆಯದು.
►ಸಮಸ್ಯೆಗೆ ಪರಿಹಾರ
ಕಷ್ಟವೆನಿಸಿದರೂ ನಿಮ್ಮ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಕೆಲವು ಬದಲಾವಣೆಗಳನನ್ನು ಮಾಡಿಕೊಳ್ಳಬೇಕು. ನೀವು ನಿದ್ರೆಯಿಂದ ಏಳುವ ಸಮಯಕ್ಕನುಗುಣವಾಗಿ ನಿಮ್ಮ ಅಲಾರ್ಮ್‌ನ್ನು ಸೆಟ್ ಮಾಡಿಕೊಳ್ಳಿ ಮತ್ತು ಅದು ಮೊಳಗಿದಾಗ ಸ್ನೂಝಿಂಗ್ ಬಟನ್ ಒತ್ತದೆ ನಿಧಾನವಾಗಿ ಎದ್ದೇಳಿ. ಇದು ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ. ಇದನ್ನು ನಿರಂತರವಾಗಿ ಕಾಯ್ದುಕೊಳ್ಳಿ ಮತ್ತು ದಿನದ ಕೊನೆಯಲ್ಲಿ ಸಹಜವಾಗಿ ನಿದ್ರೆಗೆ ಜಾರಲು ಇದು ನಿಮಗೆ ನೆರವಾಗಬಹುದು ಮತ್ತು ಮುಂದೆ ಅಲಾರ್ಮ್ ಇಲ್ಲದೆಯೂ ನಿಗದಿತ ಸಮಯಕ್ಕೆ ಏಳುವುದು ನಿಮಗೆ ಸಾಧ್ಯವಾಗುತ್ತದೆ.
ಅಂದ ಹಾಗೆ ಅಲಾರ್ಮ್‌ನ ಸ್ನೂಝಿಂಗ್ ಬಟನ್ ಒತ್ತಲೇಬೇಕು ಎಂದಿದ್ದರೆ ಅದು ಮತ್ತೊಮ್ಮೆ ಮೊಳಗುವವರೆಗೆ ಅರ್ಧ ಜಾಗ್ರತ ಸ್ಥಿತಿಯಲ್ಲಿಯೇ ಇರಿ,ಸ್ನೂಝ್‌ನ ಸಮಯದ ಅಂತರವನ್ನು ಒಂಭತ್ತು ನಿಮಿಷಗಳಿಗೆ ಕನಿಷ್ಠಗೊಳಿಸಿ. ಇದರಿಂದಾಗಿ ಸಂಭಾವ್ಯ ಹಾನಿಗಳನ್ನು ತಡೆಯಬಹುದು.