ಬಲಪ್ರಯೋಗದ ಸುಂಕ ವಸೂಲಿಗೆ ಸಂಘರ್ಷ ಅಸ್ತ್ರ: ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ
ಜು.16ರಿಂದ ಸುಂಕ ಕಡ್ಡಾಯಕ್ಕೆ ಎನ್ಎಚ್ಎಐ ತೀರ್ಮಾನ

ಮುನೀರ್ ಕಾಟಿಪಳ್ಳ
ಮಂಗಳೂರು, ಜು.13: ಸ್ಥಳೀಯ ವಾಹನಗಳು ಸುರತ್ಕಲ್ ಟೋಲ್ಗೇಟ್ನಲ್ಲಿ ಯಾವುದೇ ಕಾರಣಕ್ಕೂ ಸುಂಕ ಪಾವತಿಸುವುದಿಲ್ಲ. ಪೊಲೀಸರನ್ನು ಮುಂದಿಟ್ಟು ಬಲಪ್ರಯೋಗಿಸಿ ಸುಂಕ ವಸೂಲಿಗೆ ಮುಂದಾದರೆ ಟೋಲ್ಗೇಟ್ ಮುಚ್ಚಿಸಲು ಸಂಘರ್ಷಕ್ಕಿಳಿಯುವುದಾಗಿ ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತುರ್ತುಸಭೆಯಲ್ಲಿ ಹೋರಾಟದ ತೀರ್ಮಾನವನ್ನು ಕೈಗೊಳ್ಳಲಾಯಿತು.
ಸುರತ್ಕಲ್ ಟೋಲ್ಗೇಟ್ ಮುಚ್ಚುವ ತೀರ್ಮಾನ ಜಾರಿಗೆ ತರದೆ ಸ್ಥಳೀಯ ಖಾಸಗಿ ವಾಹನಗಳಿಗೆ ಪೊಲೀಸ್ ರಕ್ಷಣೆಯಲ್ಲಿ ಜು.16ರಿಂದ ಸುಂಕ ಕಡ್ಡಾಯಗೊಳಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ತೀರ್ಮಾನಿಸಿದೆ. ಈ ತೀರ್ಮಾಣವನ್ನು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ತಿರಸ್ಕರಿಸುವುದಾಗಿ ನಿರ್ಧರಿಸಿದೆ.
ಹೆದ್ದಾರಿ ಗುಂಡಿಗಳು, ಸರ್ವಿಸ್ ರಸ್ತೆ, ಕುಸಿಯುವ ಭೀತಿ ಎದುರಿಸುತ್ತಿರುವ ಕೂಳೂರು ಸೇತುವೆ ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಕುರಿತು ಜವಾಬ್ದಾರಿಯುತ ವರ್ತನೆ ತೋರದ ಸಂಸದ ನಳಿನ್ಕುಮಾರ್ ಕಟೀಲ್ ನಡವಳಿಕೆಯ ಕುರಿತು ಸಭೆ ಬೇಸರ ವ್ಯಕ್ತಪಡಿಸಿರುವುದಾಗಿ ತಿಳಿಸಿದರು.
ಕಳೆದ ಫೆ.28ರಂದು ಮಂಗಳೂರಿನಲ್ಲಿ ಭೂ ಸಾರಿಗೆ, ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯ ಆಪ್ತ ಕಾರ್ಯದರ್ಶಿ ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸಿದ್ದರು. ಸುರತ್ಕಲ್ ತಾತ್ಕಾಲಿಕ ಟೋಲ್ಗೇಟ್ನ್ನು ಹೆಜಮಾಡಿ ಟೋಲ್ಗೇಟ್ ಜೊತೆ ವಿಲೀನಗೊಳಿಸುವ ಪ್ರಾಧಿಕಾರದ ತೀರ್ಮಾನ ಜಾರಿಗೊಳಿಸಲು ಕೆಲವು ಅಡ್ಡಿಗಳು ಎದುರಾಗಿರುವುದರಿಂದ ಬ್ರಹ್ಮರ ಕೂಟ್ಲು ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸಿ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚುವ ಪ್ರಸ್ತಾಪವನ್ನು ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಸಾರ್ವಜನಿಕವಾಗಿ ಘೋಷಿಸಿದ್ದರು. ಇದೇ ಅಕ್ಟೋಬರ್ನಲ್ಲಿ ಈಗಿರುವ ಟೋಲ್ ಸಂಗ್ರಹದ ಗುತ್ತಿಗೆ ಕೊನೆಗೊಳ್ಳುತ್ತಿದೆ. ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯ ಆಪ್ತ ಕಾರ್ಯದರ್ಶಿಯ ಪ್ರಸ್ತಾಪದ ಪ್ರಾಥಮಿಕ ಕೆಲಸಗಳು ನಡೆಯದಿರುವುದು ಸುರತ್ಕಲ್ನ ಟೋಲ್ ಕೇಂದ್ರವನ್ನು ಮತ್ತಷ್ಟು ಕಾಲ ಮುಂದುವರಿಸುವ ಸಂಚು ಎಂದು ಸಭೆ ಅಪಾದಿಸಿತು.
ಟೋಲ್ ಸಂಗ್ರಹ ನಿಯಮದ ಪ್ರಕಾರ ನಿರ್ಮಾಣಗೊಳ್ಳಬೇಕಾದ ಸರ್ವೀಸ್ ರಸ್ತೆಗಳು ನಂತೂರಿನಿಂದ ಮುಕ್ಕದವರಗೆ ನನೆಗುದಿಗೆ ಬಿದ್ದಿರುವುದು, ಹೆದ್ದಾರಿ ಗುಂಡಿಗಳನ್ನು ಮುಚ್ಚದಿರುವುದು, ಕುಸಿಯುವ ಭೀತಿ ಎದುರಿಸುತ್ತಿರುವ ಕೂಳೂರು ಸೇತುವೆಗೆ ಬದಲಿಯಾಗಿ ಹೊಸ ಸೇತುವೆ ನಿರ್ಮಾಣದ ಕೆಲಸ ಆರಂಭವಾಗದಿರುವುದು ಮುಂತಾದ ಗಂಭೀರ ಸಮಸ್ಯೆಗಳನ್ನು ಬಗೆಹರಿಸದೆ ಜನತೆಯಿಂದ ಟೋಲ್ ಹೆಸರಿನಲ್ಲಿ ಅಕ್ರಮ ವಸೂಲಿಗಷ್ಟೇ ಪ್ರಾಧಿಕಾರ ಆದ್ಯತೆ ನೀಡುತ್ತಿರುವುದನ್ನು ಒಪ್ಪಲಾಗದು. ಈ ಸಂದರ್ಭ ಜನತೆಯ ಜತೆ ನಿಂತು ಹೋರಾಟ ತೀವ್ರಗೊಳಿಸಲು ಸಭೆ ತೀರ್ಮಾನ ಕೈಗೊಂಡಿದೆ.
ಟೋಲ್ಗೇಟ್ ಮುಚ್ಚಿಸುವ ಹೋರಾಟದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು. ಟೋಲ್ಗೇಟ್ ಮುಚ್ಚಿಸಲು ದೀರ್ಘ ಕಾಲದಿಂದ ನಡೆಯುತ್ತಿರುವ ಹೋರಾಟಕ್ಕೆ ಬಲ ತುಂಬಲು ಸಭೆಯು ಸಾರ್ವಜನಿಕರಲ್ಲಿ ಮನವಿ ಮಾಡಿತು.
ಸಭೆಯಲ್ಲಿ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಜಯಕರ್ನಾಟಕ ಸಂಘಟನೆಯ ಪ್ರಮುಖರಾದ ರಾಘವೇಂದ್ರ ರಾವ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಶ್ರೀನಾಥ್ ಕುಲಾಲ್, ಟಿ.ಎನ್. ರಮೇಶ್, ಮಹಾಬಲ ರೈ, ರಶೀದ್ ಮುಕ್ಕ ಸಹಿತ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಸಭೆಯಲ್ಲಿ ಕೈಗೊಂಡ ತೀರ್ಮಾನಗಳು
*ಜು.16ರಿಂದ ಸ್ಥಳೀಯ ಖಾಸಗಿ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ಪೊಲೀಸ್ ರಕ್ಷಣೆ ಒದಗಿಸುವ ಆದೇಶ ಹಿಂಪಡೆಯಬೇಕು
* ಸ್ಥಳೀಯರಿಂದ ಟೋಲ್ ಸಂಗ್ರಹಿಸದಂತೆ ಟೋಲ್ ಗುತ್ತಿಗೆದಾರರಿಗೆ ಸೂಚಿಸಬೇಕು
* ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ತೀರ್ಮಾನ ಅಕ್ಟೋಬರ್ ಒಳಗಡೆ ಜಾರಿಗೆ ಜಿಲ್ಲಾಧಿಕಾರಿಗೆ ಮನವಿ ನೀಡುವುದು
* ಟೋಲ್ ಸಂಗ್ರಹಕ್ಕೆ ಮುಂದಾದರೆ ಸ್ಥಳೀಯ ವಾಹನಗಳು ಸುಂಕ ನೀಡದೆ ಪ್ರತಿಭಟಿಸುವುದು.
* ಪೊಲೀಸ್ ಬಲದೊಂದಿಗೆ ಬಲವಂತವಾಗಿ ಟೋಲ್ ಸಂಗ್ರಹಕ್ಕೆ ಮುಂದಾದರೆ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಸಮಾನ ಮನಸ್ಕ ಸಂಘಟನೆಗಳು, ಸಾರ್ವಜನಿಕರ ಜೊತೆ ಸೇರಿ ಟೋಲ್ಗೇಟ್ ಮುಚ್ಚಿಸುವ ಹೋರಾಟ ನಡೆಸುವುದು.







