ಬಂಟ್ವಾಳ: ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ; ನಾಲ್ಕನೇ ಆರೋಪಿ ಸೆರೆ

ಬಂಟ್ವಾಳ : ವಿಟ್ಲಮುಡ್ನೂರು ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯನ್ನು ಅತ್ಯಾಚಾರ ನಡೆಸಿದ ಪ್ರಕರಣದ ನಾಲ್ಕನೇ ಆರೋಪಿಯನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಸಮೀಪದ ಹಲಸಿನ ಕಟ್ಟೆ ನಿವಾಸಿ ಪುನೀತ್ ಯಾನೆ ಪುರುಷೋತ್ತಮ (20) ಬಂಧಿತ ಆರೋಪಿ.
ಘಟನೆಯ ಹಿನ್ನೆಲೆ
ವಿಟ್ಲ ಮುಡ್ನೂರು ಗ್ರಾಮದ ದಲಿತ ಬಾಲಕಿಯನ್ನು ಗ್ರಾಪಂ ಸಿಬ್ಬಂದಿ ಸೇರಿ ಐವರು ಯುವಕರ ತಂಡ ಬೇರೆ, ಬೇರೆ ಸಮಯದಲ್ಲಿ ಅತ್ಯಾಚಾರ ಎಸಗಿದ್ದರು. ಇತ್ತ ಬಾಲಕಿಯ ವರ್ತನೆಯಲ್ಲಿ ಸಂಶಯಗೊಂಡ ಮನೆಯವರು ಬಾಲಕಿಯನ್ನು ವಿಚಾರಣೆ ನಡೆಸಿದಾಗ ಅತ್ಯಾಚಾರ ಪ್ರಕರಣ ಬಯಲಾಗಿತ್ತು. ಈ ಕುರಿತು ಬಾಲಕಿ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪೋಕ್ಸೊ ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಕೈಗೆತ್ತಿಗೊಂಡ ಪೊಲೀಸರು, ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ನಿವಾಸಿ, ಸ್ಥಳೀಯ ಗ್ರಾಪಂ ಶುಲ್ಕ ಸಂಗ್ರಹಕ ಕೃಷ್ಣಪ್ಪ, ವಿಟ್ಲ ಮುಡ್ನೂರು ಗ್ರಾಮದ ಶಾಂತಿಯಡ್ಕ ನಿವಾಸಿ ಧನುಷ್, ಬಾಲಕಿಯ ಸಂಬಂಧಿ ಗಣೇಶ್ ಎಂಬವರನ್ನು ಈ ಹಿಂದೆಯೇ ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದರು.
ಪ್ರಕರಣದ ಐವರು ಆರೋಪಿಗಳ ಪೈಕಿ ನಾಲ್ವರ ಬಂಧನವಾಗಿದ್ದು, ಆರೋಪಿ ಪವನ್ ಎಂಬಾತನ ಪತ್ತೆಗಾಗಿ ಪೊಲೀಸರು ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ.





