ಅ.ಪ್ರದೇಶದ ಮಾಜಿ ಸಿಎಂ ನಬಂ ಟುಕಿ ವಿರುದ್ಧ ಭ್ರಷ್ಟಾಚಾರ,ವಂಚನೆ ಆರೋಪ: ಪ್ರಕರಣ ದಾಖಲು

ಹೊಸದಿಲ್ಲಿ,ಜು.13: ಸಿಬಿಐ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಂ ಟುಕಿ ಅವರ ವಿರುದ್ಧ ಭ್ರಷ್ಟಾಚಾರ, ವಂಚನೆ ಮತ್ತು ಫೋರ್ಜರಿ ಆರೋಪಗಳಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದೆ. ಟುಕಿ ಅವರು 2011-16ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಟುಕಿ 2003ರಲ್ಲಿ ಗ್ರಾಹಕ ವ್ಯವಹಾರಗಳು ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದಾಗ ಸರಕಾರಿ ಯೋಜನೆಯೊಂದರಡಿ ಎರಡು ಪಾರ್ಕಿಂಗ್ ಲಾಟ್ಗಳ ನಿರ್ಮಾಣಕ್ಕಾಗಿ 3.2 ಕೋ.ರೂ.ಗಳ ಗುತ್ತಿಗೆಗಳ ನೀಡಿಕೆಯಲ್ಲಿ ಭ್ರಷ್ಟಾಚಾರವೆಸಗಿದ್ದರು ಮತ್ತು ಅವರ ಸೋದರ ನಬಂ ಟಗಮ್ ಅವರೂ ಇದರಲ್ಲಿ ಶಾಮೀಲಾಗಿದ್ದರು ಎಂದು ಸಿಬಿಐ ಆರೋಪಿಸಿದೆ.
ಟಗಮ್,ಆಗ ನಾಗರಿಕ ಪೂರೈಕೆ ನಿರ್ದೇಶಕರಾಗಿದ್ದ ಎನ್.ಎನ್.ಒಸಿಕ್ ಮತ್ತು ಆಗ ಯುಕೋ ಬ್ಯಾಂಕಿನ ಚೀಫ್ ಮ್ಯಾನೇಜರ್ ಆಗಿದ್ದ ಸೊಹ್ರಾಬ್ ಅಲಿ ಹಝಾರಿಕಾ ಅವರ ವಿರುದ್ಧವೂ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟುಕಿ ಸೋದರ ನಬಂ ಹರಿ,ಅವರ ಪತ್ನಿ ಮತ್ತು ಲೋಕೋಪಯೋಗಿ ಇಲಾಖೆಯ ಕೆಲವು ಅಧಿಕಾರಿಗಳ ವಿರುದ್ಧ ಸಿಬಿಐ ಕಳೆದ ತಿಂಗಳು ಪ್ರಕರಣವನ್ನು ದಾಖಲಿಸಿಕೊಂಡಿತ್ತು.