ಬಹುಮತ ಕಳೆದುಕೊಂಡಿರುವ ಸಿಎಂ ರಾಜೀನಾಮೆ ನೀಡಲಿ: ಕೋಟ ಒತ್ತಾಯ
ಉಡುಪಿ, ಜು.13: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯ ಸರಕಾರ ಬಹುಮತ ಕಳೆದುಕೊಂಡಿದ್ದು, ರಾಜ್ಯದ ಹಿತದೃಷ್ಠಿಯಿಂದ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಬಹುಮತ ಕಳೆದುಕೊಂಡಿದ್ದು, ನಮಗೆ ಸ್ಪಷ್ಟವಾದ ಬಹುಮತ ಇದೆ. ಒಂದು ವೇಳೆ ಸರಕಾರ ಬಿದ್ದರೆ ಬಿಜೆಪಿ ಸರಕಾರ ರಚಿಸುವ ಹಕ್ಕನ್ನು ಪ್ರತಿ ಪಾದಿಸಲಿದೆ ಎಂದರು.
ಜೆಡಿಎಸ್‌ನೊಂದಿಗೆ ಕೈ ಜೋಡಿಸಲು ಬಿಜೆಪಿ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಕೇವಲ ಅಧಿಕಾರಕ್ಕಾಗಿ ಒಂದಾಗಿ ದ್ದಾರೆಯೇ ಹೊರತು ಅವರಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಅವರುಗಳ ಮಧ್ಯೆ ಪರಸ್ಪರ ಅನುಮಾನಗಳು ಕಾಡುತ್ತಿವೆ ಎಂದು ಅವರು ಟೀಕಿಸಿದರು.
ರಾಜೀನಾಮೆ ನೀಡಿದ ಶಾಸಕರ ಮೇಲೆ ಒತ್ತಡ ಹೇರಲು ಎಸಿಬಿಯ ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ. ಸಚಿವ ರೇವಣ್ಣ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡುವ ಮೂಲಕ ಕಮಿಷನ್ ದಂಧೆಯಲ್ಲಿ ತೊಡಗಿದ್ದು, ಈ ವರ್ಗಾವಣೆಯನ್ನು ತಡೆ ಹಿಡಿಯುವಂತೆ ಮುಖ್ಯ ಕಾರ್ಯ ದರ್ಶಿಗೆ ಪತ್ರ ಬರೆಯಲಾವುದು ಎಂದು ಅವರು ತಿಳಿಸಿದರು.







