ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಐವನ್ ಡಿಸೋಜ
ಜನಸಂಪರ್ಕ ಸಭೆ

ಉಡುಪಿ, ಜು.13: ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಅಧಿಕಾರಿ ಗಳ ವಿರುದ್ಧ ರಾಜ್ಯ ಸರಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.
ಕಂದಾಯ ಇಲಾಖೆಯ ವತಿಯಿಂದ ಉಡುಪಿ ಮಿಶನ್ ಕಂಪೌಂಡ್ ಬಳಿಯ ಸ್ನೇಹಾಲಯ ಆಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾದ ಉಡುಪಿ ತಾಲೂಕು ಮಟ್ಟದ ಸಾರ್ವಜನಿಕ ಜನ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುವುದರಿಂದ ಸರಕಾರ ಜನಪರವಾಗಿರಲು ಸಾಧ್ಯವಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ಒದಗಿಸದ ದೇಶವು ನಿಜವಾದ ಸ್ವಾತಂತ್ರ ಹಾಗೂ ಪ್ರಜಾಪ್ರಭುತ್ವ ದೇಶ ಆಗಲು ಸಾಧ್ಯವಿಲ್ಲ. ಆದುದರಿಂದ ಅಧಿಕಾರಿಗಳು ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಸರಳ ಕಾನೂನಿನಿಂದ ಜನರಿಗೆ ಸರಕಾರದ ಸೌಲಭ್ಯ ಪಡೆಯಲು ಸಾಧ್ಯವಾಗು ತ್ತದೆ. ಆ ನಿಟ್ಟಿನಲ್ಲಿ ಕಾನೂನಿನಲ್ಲಿ ಸರಳೀಕರಣ ತರುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ. ಈ ಮೂಲಕ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಅವರು ತಿಳಿಸಿದರು.
ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಡಾ.ಎಸ್.ಎಸ್.ಮಧು ಕೇಶ್ವರ್ ಮಾತನಾಡಿ, ಬ್ರಿಟಿಷರ ಆಳ್ವಿಕೆಯಲ್ಲಿ ಜನವಿರೋಧಿಯಾಗಿದ್ದ ಸರಕಾರ ಈಗ ಪ್ರಜಾಪ್ರಭುತ್ವದಲ್ಲಿ ಜನಪರ ಕೆಲಸ ಮಾಡುತ್ತಿದೆ. ಹಿಂದೆ ಜನ ಅಧಿಕಾರಿ ಗಳಿಗೆ ಹೆದರುತ್ತಿದ್ದರೆ, ಇಂದು ಅಧಿಕಾರಿಗಳೇ ಜನರಿ ಗಾಗಿ ಕೆಲಸ ಮಾಡುವ ಮನೋಭಾವವನ್ನು ಹೊಂದಿದ್ದಾರೆ. ತಾರತಮ್ಯ ಇಲ್ಲದೆ ಸಮಾನವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸರಕಾರ ಕಾನೂನು ಗಳನ್ನು ರೂಪಿಸಿದೆ. ಆ ಕಾನೂನಿನ ಚೌಕಟ್ಟಿನಡಿಯಲ್ಲೇ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸ ಲಾಯಿತು. ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜು ಕೆ. ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಎಚ್.ಆರ್. ಲಮಾಣಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕಿಶೋರ್ ಪುತ್ರನ್, ಆರೋಗ್ಯ ಇಲಾಖೆಯ ಡಾ.ಸುರೇಂದ್ರ, ಮೀನುಗಾರಿಕೆ ಇಲಾಖೆಯ ಸಹಾ ಯಕ ನಿರ್ದೇಶಕ ಕಿರಣ್ ಅಧಿಕಾರಿಗಳಾದ ಮಂಜುನಾಥ್ ಎ.ಎಸ್., ಮೋಹನ್‌ರಾಜ್, ಲಕ್ಷ್ಮೀಕಾಂತ್ ಹಾಜರಿದ್ದರು.
ಮಾಜಿ ತಾಪಂ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ, ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ಉಡುಪಿ ಜಿಲ್ಲ್ಲಾ ಅಧ್ಯಕ್ಷ ಸುನೀಲ್ ಕಬ್ರಾಲ್ ಶಿರ್ವ, ರೋನಾಲ್ಡ್ ಮನೋಹರ್ ಕರ್ಕಡ ಉಪಸ್ಥಿತರಿದ್ದರು. ಉಪಾಧ್ಯಕ್ಷ ಮೆಲ್ವಿನ್ ಡಿಸೋಜ ಸ್ವಾಗತಿಸಿ ದರು. ಸಹಕಾರ್ಯ ದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.







