ಬೈರಂಪಳ್ಳಿ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣ; ಆರೋಪಿಗಳ ಗುರುತು ಪತ್ತೆ- ಬಂಧನಕ್ಕೆ ಮುಂದುವರಿದ ಶೋಧ
ಹಿರಿಯಡ್ಕ, ಜು.13: ಖಾಸಗಿ ಬಸ್ ನಿರ್ವಾಹಕ, ಬೈರಂಪಳ್ಳಿ ಗ್ರಾಮದ ದೂಪದಕಟ್ಟೆಯ ಹುಣ್ಸೆಬಾಕೇರ್ ನಿವಾಸಿ ಪ್ರಶಾಂತ್ ಪೂಜಾರಿ(37) ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ತಲೆಮರೆಸಿ ಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕೊಲೆ ಆರೋಪಿಗಳನ್ನು ಕುಕ್ಕೆಹಳ್ಳಿಯ ಬುಕ್ಕಿಗುಡ್ಡೆ ನಿವಾಸಿ ರಕ್ಷಕ್ ಪೂಜಾರಿ (19) ಹಾಗೂ ಪೆರ್ಡೂರು ಆಲಂಗಾರು ನಿವಾಸಿ ಸಚಿನ್ ನಾಯ್ಕೆ(24) ಎಂದು ಗುರುತಿಸಲಾಗಿದ್ದು, ಇವರಲ್ಲಿ ರಕ್ಷಕ್ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದರೆ, ಸಚಿನ್ ಪೆರ್ಡೂರಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದನು. ಬಸ್‌ನಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿದ್ದ ಪ್ರಶಾಂತ್ ಪೂಜಾರಿ ಹಾಗೂ ರಕ್ಷಕ್ ಪರಿಚಯಸ್ಥರಾಗಿದ್ದು, ಪ್ರಶಾಂತ್ ಪೂಜಾರಿ ಉಡುಪಿ ಯ ಸೊಸೈಟಿಯೊಂದರಲ್ಲಿ ರಕ್ಷಕ್‌ಗೆ 50ಸಾವಿರ ರೂ. ಸಾಲ ತೆಗೆಸಿಕೊಟ್ಟಿದ್ದನು. ಅದಕ್ಕಾಗಿ ರಕ್ಷಕ್, ಪ್ರಶಾಂತ್ ಪೂಜಾರಿಗೆ 5000 ರೂ. ಕಮಿಷನ್ ನೀಡಿದ್ದನು.
ಆದರೆ ರಕ್ಷಕ್ ಸೊಸೈಟಿಯ ಸಾಲದ ಕಂತು ಪಾವತಿಸದ ಬಗ್ಗೆ ಪ್ರಶಾಂತ್ ಪೂಜಾರಿ ಆತನೊಂದಿಗೆ ಗಲಾಟೆ ಮಾಡಿದ್ದ ಎನ್ನಲಾಗಿದೆ. ಇದೇ ಸಿಟ್ಟಿನಲ್ಲಿ ರಕ್ಷಕ್ ಜು.11ರಂದು ರಾತ್ರಿ ಮದ್ಯ ಸೇವಿಸಿ ತನ್ನ ಸ್ನೇಹಿತ ಸಚಿನ್ ನಾಯ್ಕಿನ ಬೈಕಿನಲ್ಲಿ ಪ್ರಶಾಂತ್ ಪೂಜಾರಿ ಮನೆಗೆ ಬಂದಿದ್ದು, ಅಲ್ಲಿ ಇವರಿಬ್ಬರು ಪ್ರಶಾಂತ್ ಪೂಜಾರಿಯ ದೇಹದ 52 ಭಾಗಗಳಿಗೆ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಬೈಕಿನ ಕೀ ಕಳೆದು ಹೋದ ಹಿನ್ನೆಲೆಯಲ್ಲಿ ಅದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳು ಗೋವಾ ಅಥವಾ ಮೈಸೂರಿನಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಆರೋಪಿಗಳ ಶೋಧ ಕಾರ್ಯ ವನ್ನು ಪೊಲೀಸರು ಮುಂದುವರೆಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ಯಾಗಿರುವ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ತನಿಖೆ ನಡೆಸುತ್ತಿದ್ದಾರೆ.
ಬಂಕಿನಲ್ಲಿ ಹಣ ಕಳವಿಗೆ ಯತ್ನ
ಕೊಲೆ ಮಾಡಿದ ಬಳಿಕ ಸಚಿನ್ ನೇರವಾಗಿ ತಾನು ಕೆಲಸ ಮಾಡುವ ಪೆರ್ಡೂರಿನ ಪೆಟ್ರೋಲ್ ಬಂಕ್‌ಗೆ ಬಂದು, ಅಲ್ಲಿನ ಕಚೇರಿಯ ಗಾಜು ಒಡೆದು ಹಣ ಕಳವಿಗೆ ಯತ್ನಿಸಿದ್ದ ಎನ್ನಲಾಗಿದೆ.
ಈ ಕುರಿತ ದೃಶ್ಯ ಪೆಟ್ರೋಲ್ ಬಂಕಿನಲ್ಲಿ ಆಳವಡಿಸಲಾದ ಸಿಸಿ ಕ್ಯಾಮೆರಾ ದಲ್ಲಿ ದಾಖಲಾಗಿದೆ. ಈ ಕುರಿತು ಪೆಟ್ರೋಲ್ ಬಂಕಿನವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದರೆ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.







