ಇಎಸ್‌ಐ ಸಂಸ್ಥೆ ಹೆಸರಿನಲ್ಲಿ ನೌಕರ ಸಹಿತ ಮೂವರಿಂದ ವಂಚನೆ: ದೂರು
ಉಡುಪಿ, ಜು.13: ಇಎಸ್‌ಐ ಕಾರ್ಪೋರೇಷನ್ ಎಂಬ ಸರಕಾರಿ ಸಂಸ್ಥೆಯ ಹೆಸರಿನಲ್ಲಿ ವಂಚನೆ ಎಸಗಿರುವ ಉಡುಪಿ ಇಎಸ್‌ಐ ಚಿಕಿತ್ಸಾಲಯದ ಸಿಬ್ಬಂದಿ ಸಹಿತ ಮೂವರ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಸ್ ಇಂಡಿಯಾ ಎನ್‌ಜಿಓ ಸಂಸ್ಥೆಯ ಸ್ಥಾಪಕಾಧ್ಯಕ್ಷ ಜಿ.ಎ.ಕೊಟೆಯಾರ್, ಉಡುಪಿ ಮೆಸರ್ಸ್ ಸಿದ್ಧಿವಿನಾಯಕ ಆಟೋ ಟ್ರಾವೆಲ್ಸ್ ಮಾಲಕ ವಿಠಲ್ ಜತ್ತನ್ನ ಹಾಗೂ ಉಡುಪಿ ಇಎಸ್‌ಐ ಚಿಕಿತ್ಸಾಲಯದ ಸಿಬ್ಬಂದಿ ಹರೀಶ್ ಸೇರಿ ಕೊಂಡು ಒಳಸಂಚು ನಡೆಸಿ ಇಎಸ್‌ಐ ಸವಲತ್ತುಗಳನ್ನು ಉಡುಪಿ ಪ್ರದೇಶದ ಆಟೋರಿಕ್ಷಾ ಚಾಲಕರಿಗೆ ಮತ್ತು ಇತರರಿಗೆ ದೊರಕಿಸಿ ಕೊಡುವುದಾಗಿ ನಂಬಿಸಿದ್ದಾರೆ ಎಂದು ದೂರಲಾಗಿದೆ.
ಇವರು ಮೆಸರ್ಸ್ ಸಿದ್ಧಿವಿನಾಯಕ ಆಟೋ ಟ್ರಾವೆಲ್ಸ್ ಮತ್ತು ಏಜನ್ಸಿಸ್ ಸಂಸ್ಥೆಯನ್ನು ಆರಂಭಿಸಿ ಸದಸ್ಯರಿಂದ ಜನವರಿ ತಿಂಗಳಿನಿಂದ ಮೇ ತಿಂಗಳ ಕೊನೆಯ ತನಕ 25,920ರೂ. ಪಡೆದಿದ್ದು, ಇಎಸ್‌ಐ ಸಂಸ್ಥೆಯ ಹೆಸರು ಕೆಡಿಸುವ ಉದ್ದೇಶದಿಂದ ಮತ್ತು ಸ್ವಂತ ಲಾಭ ಪಡೆಯಲು ವಂಚನೆ ಎಸಗಿ ಸಂಸ್ಥೆಗೆ ಮೋಸ ಮಾಡಿದ್ದಾರೆ. ಅಲ್ಲದೆ ಇಎಸ್‌ಐ ಸಂಸ್ಥೆಯ ಅಧಿಕೃತ ಲಾಂಛನ ವನ್ನು ಕರಪತ್ರಗಳಲ್ಲಿ ಮುದ್ರಿಸಿ ದುರ್ಬಳಕೆ ಮಾಡಿದ್ದಾರೆ ಮತ್ತು ಇಎಸ್ಐಯ ಅಧಿಕೃತ ಪ್ರತಿನಿಧಿ ಎಂದು ಹೇಳಿಕೊಂಡು ರಿಕ್ಷಾ ಚಾಲಕರು ಹಾಗೂ ಇತರರಿಗೆ ಮೋಸ ಮಾಡಿದ್ದಾರೆ.
ಅಲ್ಲದೆ ಕೆಲವು ಸದಸ್ಯರಿಗೆ ಅನಧಿಕೃತವಾಗಿ ಇ-ಪೆಹಚಾನ್ ಕಾರ್ಡ್ ವಿತರಿಸಿದ್ದು, ಅವರಿಂದ ಪಡೆದಿರುವ ಹಣದ ಬಗ್ಗೆ ದಾಖಲೆ ಪತ್ರಗಳನ್ನು ಸರಿಯಾಗಿ ನಿರ್ವಹಿಸದೆ ಸುಳ್ಳು ಲೆಕ್ಕ ಪತ್ರಗಳನ್ನು ನಮೂದಿಸಿದ್ದಾರೆ ಎಂದು ಕಾರ್ಮಿಕರ ರಾಜ್ಯ ವಿಮಾ ನಿಗಮ ಉಪ-ಪ್ರಾದೇಶಿಕ ಕಚೇರಿ ಮಂಗಳೂರು ಇದರ ಪ್ರಭಾರ ಹಿರಿಯ ಉಪನಿರ್ದೇಶಕ ಎಸ್.ಸಿವರಾಮಕೃಷ್ಣನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.







