ಎಸ್ಸಿ,ಎಸ್ಟಿ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಕಾಮಗಾರಿಗಳಿಗೆ ಬಳಕೆ: ಆರೋಪ
ಕುಂದು ಕೊರತೆ ನಿವಾರಣ ಸಭೆ

ಬಂಟ್ವಾಳ, ಜು. 13: ಎಸ್ಸಿ, ಎಸ್ಟಿಯ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕಾರ್ಯಗಳಿಗೆ ಬಳಸಲಾಗುತ್ತಿದೆ. ಸಾಮಾನ್ಯ ಕಾಮಗಾರಿಗೆ ಸರಕಾರದಿಂದ ಅನುದಾನ ಬರುವುದಿಲ್ಲವೇ? ಇವುಗಳ ಅನುದಾನವೇ ಬೇಕೆ? ಎಂದು ದಲಿತ ಮುಖಂಡರು ಪುರಸಭಾ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪುರಸಭಾ ವ್ಯಾಪ್ತಿಯ ಎಸ್ಸಿ, ಎಸ್ಟಿ ಕುಂದು ಕೊರತೆ ನಿವಾರಣ ಸಭೆಯಲ್ಲಿ ದಲಿತ ಮುಖಂಡರು ಆಕ್ರೋಶವ್ಯಕ್ತಪಡಿಸಿ, ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ದಿಗೆ ಮೀಸಲಿಟ್ಟ ಹಣವನ್ನು ಸಾಮಾನ್ಯ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸರಕಾರದ ಸುತ್ತೋಲೆಯಂತೆ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದಾಗ, ಈಗ ಸರಕಾರವೇ ಸರಿ ಇಲ್ಲ, ಸುತ್ತೋಲೆ ಸರಿ ಇರುತ್ತದೆಯೇ? ಎಂದು ಲೇವಡಿ ಮಾಡಿದರು.
ಈ ಹಿಂದೆಲ್ಲಾ ಪುರಸಭೆಯ ವತಿಯಿಂದ ನೀರಿನ ಟ್ಯಾಂಕ್, ಕಪಾಟು, ರಿಕ್ಷಾ ಮೊದಲಾದ ಸವಲತ್ತುಗಳನ್ನು ನೀಡುವ, ದಲಿತರ ಮನೆಗೆ ಸೋಲಾರ್ ಸೌಲಭ್ಯ ಒದಗಿಸಿ ಕೊಡುವಂತೆ ಸಭೆ ಆಗ್ರಹಿಸಿತು.ಪುರಸಭಾ ವ್ಯಾಪ್ತಿಯ ಎಲ್ಲಾ ದಲಿತರ ಮನೆಗೆ ಉಚಿತವಾಗಿ ನೀರು ಒದಗಿಸ ಬೇಕು ಎಂಬ ಒತ್ತಾಯ ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮನೆಮನೆಗೆ ಉಚಿತ ಸಂಪರ್ಕ ಕೊಡಬಹುದು ಆದರೆ ಬಿಲ್ ಉಚಿತ ಮಾಡಲು ಸಾಧ್ಯವಿಲ್ಲ ಎಂದರು.
ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಉಚಿತ ನೀರು ಕೊಡುತ್ತಾರೆ ಇಲ್ಲಿ ಯಾಕೆ ಸಾಧ್ಯವಿಲ್ಲ ಎಂದು ರಾಜಾ ಪಲ್ಲಮಜಲು ಪ್ರಶ್ನಿಸಿದಾಗ ಇದು ಸರಕಾರದ ಹಂತದಲ್ಲಿ ನಿರ್ಧಾರ ಆಗಬೇಕಾದ ವಿಚಾರವಾಗಿದ್ದು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಿಳಿಸಿದರು.
ಸರಕಾರಿ ಆಸ್ಪತ್ರೆಯ ಆರೋಗ್ಯ ಮಿತ್ರ ಕಾರ್ಯಕರ್ತೆ ಉಷಾ ಆರೋಗ್ಯ ಮಾಹಿತಿ ನೀಡಿದರು. ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಪ್ರಬಂಧಕಿ ಲೀಲಾವತಿ, ಸಮುದಾಯ ಸಂಘಟಕಿ ಉಮಾವತಿ ಉಪಸ್ಥಿತರಿದ್ದರು. ಪ್ರಮುಖರಾದ ವಿಶ್ವನಾಥ ಚೆಂಡ್ತಿಮಾರ್, ಪುರಸಭಾ ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ, ಮಾಜಿ ಸದಸ್ಯೆ ಸಂಧ್ಯಾ ನಾಯ್ಕ್ , ರಾಜಾ ಪಲ್ಲಮಜಲು, ಗಂಗಾಧರ ಪರಾರಿ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.







