‘ಹಸಿರೇ ಉಸಿರು’ ಯಕ್ಷಗಾನ ಪ್ರದರ್ಶನ

ಮಂಗಳೂರು, ಜು.13: ದ.ಕ. ಜಿಲ್ಲಾಡಳಿತ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆ 2019 ಮತ್ತು ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಹಸಿರೇ ಉಸಿರು’ ಯಕ್ಷಗಾನ ಪ್ರದರ್ಶನಗೊಂಡಿತು.
ಪರಿಸರ ನಾಶದಿಂದ ಆಗುವ ಅನಾಹುತ, ಪರಿಸರ ಮಾಲಿನ್ಯಕ್ಕೆ ಕಾರಣಗಳೇನು ?, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹೇಗೆ ಉಳಿಸಿ ಬೆಳೆಸಬಹುದು ಎಂಬ ಪರಿಸರ ಸಂದೇಶವನ್ನು ‘ಹಸಿರೇ ಉಸಿರು’ ಯಕ್ಷಗಾನದ ಮೂಲಕ ಸಾದರಪಡಿಸಲಾಯಿತು.
ಕದ್ರಿ ನವನೀತ ಶೆಟ್ಟಿ ಪರಿಕಲ್ಪನೆಯಡಿ ಡಾ.ದಿನಕರ ಎಸ್. ಪಚ್ಚನಾಡಿ ಪ್ರಸಂಗ ರಚಿಸಿದ್ದಾರೆ. ಭಾಗವತಿಕೆಯಲ್ಲಿ ಭವ್ಯಶ್ರೀ ಕುಲ್ಕುಂದ, ಮದ್ದಲೆಯಲ್ಲಿ ಕುಸುಮಾಕರ ಮುಡಿಪು, ಚೆಂಡೆಯಲ್ಲಿ ರೋಹಿತ್ ಉಚ್ಚಿಲ, ಚಕ್ರತಾಳದಲ್ಲಿ ನಿತೀಶ್ ಶೆಟ್ಟಿ ಬೋಳೂರು ಸಹಕರಿಸಿದರು.
ವೃಕ್ಷಕನಾಗಿ ಡಾ.ದಿನಕರ ಎಸ್. ಪಚ್ಚನಾಡಿ ಹಾಗೂ ಲತಾಂಗಿಯಾಗಿ ಅರುಣ್ ಕೋಟ್ಯಾನ್ ಪ್ರಧಾನ ಪಾತ್ರ ನಿರ್ವಹಿಸಿದರು. ಶರತ್ ಪಣಂಬೂರು, ಗುರುರಾಜ್ ಕಾಳಿಕಾಂಬಾ, ಪೂರ್ಣೇಶ್ ಆಚಾರ್ಯ, ಅರುಣ್ ಕೋಟ್ಯಾನ್, ಶೈಲೇಶ್ ಬೈಕಂಪಾಡಿ, ಸಾತ್ವಿಕ್ ಕುಮಾರ್, ಕಿರಣ್ ಕುಮಾರ್ ಇತರ ಪಾತ್ರ ನಿರ್ವಹಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಪಿಯೂಷ್ ಎಲ್. ರೋಡಿಗ್ರಸ್, ಎಂ. ವೆಂಕಟರಾಮು, ಹನುಮಗೌಡ ಮರಕಲ್, ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಸ್ಮರಣಿಕೆ ನೀಡಿ, ಯಕ್ಷಗಾನ ಕಲಾವಿದರನ್ನು ಗೌರವಿಸಿದರು.







