ರಹಸ್ಯ ಟಿಪ್ಪಣಿ ಸೋರಿಕೆ ಬಗ್ಗೆ ತನಿಖೆ ಆರಂಭ: ಬ್ರಿಟಿಶ್ ಪೊಲೀಸ್
ಲಂಡನ್, ಜು. 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಟೀಕಿಸುವ ಬ್ರಿಟಿಶ್ ರಾಯಭಾರಿಯ ಟಿಪ್ಪಣಿಗಳು ಸೋರಿಕೆಯಾಗಿರುವ ಬಗ್ಗೆ ಕ್ರಿಮಿನಲ್ ತನಿಖೆ ಆರಂಭಿಸಿರುವುದಾಗಿ ಬ್ರಿಟಿಶ್ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಅಮೆರಿಕಕ್ಕೆ ಬ್ರಿಟನ್ ರಾಯಭಾರಿಯಾಗಿದ್ದ ಕಿಮ್ ಡರೋಚ್ ತನ್ನ ದೇಶಕ್ಕೆ ಕಳುಹಿಸಿದ್ದ ರಹಸ್ಯ ಟಿಪ್ಪಣಿಗಳು ಸೋರಿಕೆಯಾಗಿರುವುದನ್ನು ಸ್ಮರಿಸಬಹುದಾಗಿದೆ. ‘ಟ್ರಂಪ್ ಓರ್ವ ಅಸಮರ್ಥ’ ಹಾಗೂ ‘ಅವರ ಶ್ವೇತಭವನ ನಿಷ್ಕ್ರಿಯವಾಗಿದೆ’ ಎಂಬುದಾಗಿ ಡರೋಚ್ ತನ್ನ ಟಿಪ್ಪಣಿಗಳಲ್ಲಿ ಹೇಳಿದ್ದರು.
ಈ ಟಿಪ್ಪಣಿಗಳು ಟ್ರಂಪ್ ಆಕ್ರೋಶಕ್ಕೆ ಕಾರಣವಾದವು. ಈ ಹಿನ್ನೆಲೆಯಲ್ಲಿ, ಬ್ರಿಟನ್ ರಾಯಭಾರಿ ಈ ವಾರ ರಾಜೀನಾಮೆ ನೀಡಿದ್ದಾರೆ.
ಬ್ರಿಟನ್‌ನ ಸರಕಾರಿ ರಹಸ್ಯಗಳ ಕಾಯ್ದೆಯ ಸಂಭಾವ್ಯ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸುವ ತನ್ನ ಭಯೋತ್ಪಾದನೆ ನಿಗ್ರಹ ಕಮಾಂಡ್, ಡರೋಚ್ ಟಿಪ್ಪಣಿಗಳು ಸೋರಿಕೆಯಾಗಿರುವ ಬಗ್ಗೆ ತನಿಖೆ ಆರಂಭಿಸಿದೆ ಎಂದು ಲಂಡನ್‌ನ ಮೆಟ್ರೊಪಾಲಿಟನ್ ಪೊಲೀಸರು ಹೇಳಿದ್ದಾರೆ.
‘‘ಬ್ರಿಟನ್‌ನ ಅಂತರ್‌ರಾಷ್ಟ್ರೀಯ ಸಂಬಂಧಗಳಿಗೆ ಹಾನಿಯಾಗಿದೆ ಎನ್ನುವುದು ನನಗೆ ಖಾತ್ರಿಯಾಗಿದೆ. ಸೋರಿಕೆಗೆ ಕಾರಣರಾಗಿರುವ ವ್ಯಕ್ತಿ ಅಥವಾ ಜನರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸುವುದರಲ್ಲಿ ಸ್ಪಷ್ಟವಾದ ಸಾರ್ವಜನಿಕ ಹಿತಾಸಕ್ತಿಯಿದೆ’’ ಎಂದು ಸಹಾಯಕ ಕಮಿಶನರ್ ನೀಲ್ ಬಸು ಹೇಳಿಕೆಯೊಂದರಲ್ಲಿ ತಿಳಿಸಿದರು