ಅತೃಪ್ತ ಶಾಸಕರ ಮನವೊಲಿಕೆಗೆ ಸೋಮವಾರ ‘ಕೈ’ ಶಾಸಕಾಂಗ ಪಕ್ಷದ ಸಭೆ

ಫೈಲ್ ಚಿತ್ರ
ಬೆಂಗಳೂರು, ಜು. 14: ಶಾಸಕರ ಸರಣಿ ರಾಜೀನಾಮೆ ಹಿನ್ನೆಲೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಪತನದ ಅಂಚಿಗೆ ಬಂದಿದ್ದು, ಸರಕಾರ ಉಳಿಸಿಕೊಳ್ಳಲು ನಾಳೆ(ಜು.15) ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.
ಶಾಸಕಾಂಗ ಪಕ್ಷದ ನಾಯಕರು ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಗರದ ಯಶವಂತಪುರದಲ್ಲಿನ ಖಾಸಗಿ ಹೊಟೇಲ್ನಲ್ಲಿ ನಾಳೆ ಬೆಳಗ್ಗೆ 9 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಎಲ್ಲ ಶಾಸಕರು ಭಾಗವಹಿಸಬೇಕೆಂದು ಸೂಚನೆ ನೀಡಿದ್ದು, ವಿಧಾನ ಮಂಡಲ ಅಧಿವೇಶನದಲ್ಲಿ ಭಾಗವಹಿಸುವಂತೆ ಈಗಾಗಲೇ ಶಾಸಕರಿಗೆ ವಿಪ್ ನೀಡಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 16 ಮಂದಿ ಅತೃಪ್ತರು ಮುಂಬೈನಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಅತೃಪ್ತರ ಮನವೊಲಿಕೆ, ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಕುರಿತು ರಣತಂತ್ರ ರೂಪಿಸುವುದು, ಅತೃಪ್ತರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮಕೈಗೊಳ್ಳಲು ಕೋರಿ ಸ್ಪೀಕರ್ಗೆ ದೂರು ನೀಡುವುದು ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ.





