ಸರಕಾರ ಉಳಿಯುವುದಾದರೆ ಸಿಎಂ ಸ್ಥಾನ ತ್ಯಾಗಕ್ಕೂ ಸಿದ್ಧ: ಕುಮಾರಸ್ವಾಮಿ
"ಕಾಂಗ್ರೆಸ್ ನವರೇ ಮುಖ್ಯಮಂತ್ರಿಯಾಗಲಿ, ನನ್ನ ಅಭ್ಯಂತರವಿಲ್ಲ"

ಬೆಂಗಳೂರು, ಜು.17: ಅತೃಪ್ತ ಶಾಸಕರು ತಮ್ಮ ರಾಜೀನಾಮೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕುರಿತು ಸುಪ್ರೀಂಕೋರ್ಟ್ ತನ್ನ ಮಧ್ಯಂತರ ಆದೇಶ ಪ್ರಕಟಿಸಿದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದರು.
ನಗರದ ದೊಮ್ಮಲೂರಿನಲ್ಲಿರುವ ಸಚಿವ ಕೆ.ಜೆ.ಜಾರ್ಜ್ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಚಿವ ಎಂ.ಬಿ.ಪಾಟೀಲ್, ಕೃಷ್ಣಭೈರೇಗೌಡ ಜೊತೆ ನಾಳೆ ನಡೆಯಲಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಈ ಚರ್ಚೆ ವೇಳೆ ಮುಖ್ಯಮಂತ್ರಿ ಬದಲಾವಣೆಯಿಂದ ಸರಕಾರ ಉಳಿಯುವುದಾದರೆ ನಾನು ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಲು ಸಿದ್ಧ. ಈ ನಿರ್ಧಾರದಿಂದ ಅತೃಪ್ತ ಶಾಸಕರು ವಾಪಸ್ ಬಂದು ಸರಕಾರಕ್ಕೆ ಬೆಂಬಲ ನೀಡುತ್ತಾರಾ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಕಾಂಗ್ರೆಸ್ ನಾಯಕರಿಗೆ ಕುಮಾರಸ್ವಾಮಿ ಹೇಳಿರುವುದಾಗಿ ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದವರೇ ಮುಖ್ಯಮಂತ್ರಿಯಾಗಲಿ, ನನ್ನದೇನು ಅಭ್ಯಂತರವಿಲ್ಲ. ನಾನು ನಾಳೆ ವಿಶ್ವಾಸಮತ ಯಾಚಿಸಬೇಕಿದೆ. ಆದುದರಿಂದ, ಅತೃಪ್ತ ಶಾಸಕರು ವಾಪಸ್ ಬಂದ ಬಳಿಕ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚಿಸೋಣ ಎಂದು ಅವರು ತಿಳಿಸಿರುವುದಾಗಿ ಹೇಳಲಾಗುತ್ತಿದೆ.
ಜಾರ್ಜ್ ನಿವಾಸದಲ್ಲಿ ನಡೆದ ಸಭೆಯ ಬಳಿಕ ಸಿದ್ದರಾಮಯ್ಯ, ಪರಮೇಶ್ವರ್, ಎಂ.ಬಿ.ಪಾಟೀಲ್, ಕುಮಾರಸ್ವಾಮಿ, ಕೃಷ್ಣಭೈರೇಗೌಡ ಸೇರಿದಂತೆ ಇನ್ನಿತರ ಮುಖಂಡರು ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ರಮೇಶ್ ಕುಮಾರ್ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.