ಉಡುಪಿ: ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಉದ್ಯೋಗ ಮೇಳ

ಉಡುಪಿ, ಜು.17: ಉದ್ಯೋಗಾಕಾಂಕ್ಷಿಗಳಲ್ಲಿ ಶಿಕ್ಷಣ ಪ್ರಮಾಣಪತ್ರ ಇದೆ. ಆದರೆ ಸಂಬಂಧಿಸಿದ ಉದ್ಯೋಗಗಳಿಗೆ ಕೌಶಲ್ಯದ ಕೊರತೆ ಇದೆ. ಇದಕ್ಕಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕೌಶಲ್ಯ ಭಾರತ ಕಾರ್ಯಕ್ರಮದ ಮೂಲಕ ತರಬೇತಿಯನ್ನು ಉಚಿತವಾಗಿ ನೀಡಿ ಉತ್ತಮ ಕೌಶಲ್ಯದೊಂದಿಗೆ ಉದ್ಯೋಗ ಪಡೆಯಲು ಸಹಕರಿಸುತ್ತದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಭಾಸ್ಕರ್ ಎ. ಅಮೀನ್ ಹೇಳಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಯುವ ಉದ್ಯೋಗಾಕಾಂಕ್ಷಿಗಳ ಸೇವಾ ಕೇಂದ್ರ(ಯಸ್) ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸೋಮವಾರ ವಿಶ್ವ ಯುವ ಕೌಶಲ್ಯ ದಿನಾಚರಣೆಯ ಅಂಗವಾಗಿ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಛೇರಿಯ ಸಹಾಯಕ ನಿದೇರ್ಶಕ ಅಶೋಕ್‌ಕುಮಾರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಜಾಬ್ ಡೆವಲಪ್‌ಮೆಂಟ್ ಎಕ್ಸಿಕ್ಯುಟೀವ್ ಪ್ರಸನ್ನ ಹಾಗೂ ಕಂಪೆನಿಗಳ ಉದ್ಯೋಗದಾತರು ಉಪಸ್ಥಿತರಿದ್ದರು.
ಉಡುಪಿ ಉದ್ಯೋಗ ವಿನಿಮಯ ಕಚೇರಿ ಸಮಾಲೋಚಕ ಮತ್ತು ತರಬೇತುದಾರ ಜಗತ್ ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





