ಬೆಳ್ಳಿ ಬಾಚಿಕೊಂಡ ಬಿಲ್ಲುಗಾರ್ತಿ ದೀಪಿಕಾ
ಟೋಕಿಯೊ ಒಲಿಂಪಿಕ್ಸ್ ಟೆಸ್ಟ್ ಇವೆಂಟ್

ಟೋಕಿಯೊ, ಜು.17: ಭಾರತದ ಅಗ್ರ-ರ್ಯಾಂಕಿನ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ನಡೆದ 2020ರ ಟೋಕಿಯೋ ಒಲಿಂಪಿಕ್ ಗೇಮ್ಸ್ ಟೆಸ್ಟ್ ಇವೆಂಟ್‌ನಲ್ಲಿ ಕೊರಿಯಾದ ಅನ್ ಸ್ಯಾನ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಬೆಳ್ಳಿ ಪದಕವನ್ನು ಬಾಚಿಕೊಂಡರು.
ಕ್ವಾಲಿಫಿಕೇಶನ್ ರೌಂಡ್‌ನಲ್ಲಿ ನಾಲ್ಕನೇ ರ್ಯಾಂಕಿನಲ್ಲಿದ್ದ ದೀಪಿಕಾ ಎರಡನೇ ಶ್ರೇಯಾಂಕದ ಸ್ಯಾನ್ ವಿರುದ್ಧ ಕಠಿಣ ಸವಾಲು ಎದುರಿಸಿದರೂ ಅಂತಿಮವಾಗಿ 6-0 ಅಂತರದಿಂದ ಪಂದ್ಯವನ್ನು ಜಯಿಸಿದರು.
‘‘ಇತ್ತೀಚೆಗಷ್ಟೇ ನಾನು ನನ್ನ ಟೆಕ್ನಿಕ್‌ನ್ನು ಬದಲಿಸಿಕೊಂಡಿದ್ದೇನೆ. ನಾನು ಇಲ್ಲಿ ಸಾಕಷ್ಟು ಕಲಿತಿದ್ದೇನೆ. ಇದೀಗ ಪ್ರಗತಿಯಾಗಿರುವೆ.ಪಂದ್ಯ ಸೋತ ಸಂದರ್ಭದಲ್ಲಿ ನಾನು ನನ್ನ ಶೂಟಿಂಗ್‌ನ್ನು ಸಂಪೂರ್ಣವಾಗಿ ಮರೆಯುವೆ.ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತೇನೆ’’ ಎಂದು ದೀಪಿಕಾ ಹೇಳಿದರು.
ಭಾರತೀಯ ಮಹಿಳಾ ಆರ್ಚರಿ ತಂಡ ಇನ್ನಷ್ಟೇ ಮುಂದಿನವರ್ಷದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾಗಿದೆ. 2018ರ ಜೂನ್‌ನಲ್ಲಿ ಸಾಲ್ಟ್‌ಲೇಕ್ ಸಿಟಿಯಲ್ಲಿ ನಡೆದ ಮೂರನೇ ಹಂತದ ವಿಶ್ವಕಪ್‌ನಲ್ಲಿ ಚಿನ್ನ ಜಯಿಸಿದ ಬಳಿಕ ಇದೇ ಮೊದಲ ಬಾರಿ ದೀಪಿಕಾ ವಿಶ್ವಮಟ್ಟದ ಸ್ಪರ್ಧೆಯಲ್ಲಿ ವೈಯಕ್ತಿಕ ಪದಕ ಜಯಿಸಿದರು.
ಟೋಕಿಯೋ ಗೇಮ್ಸ್‌ಗೆ ಒಲಿಂಪಿಕ್ಸ್ ಕೋಟಾದಿಂದ ವಂಚಿತವಾಗಿರುವ ಭಾರತೀಯ ಮಹಿಳಾ ಆರ್ಚರಿ ತಂಡಕ್ಕೆ ದೀಪಿಕಾ ಅವರ ಬೆಳ್ಳಿ ಪದಕದ ಸಾಧನೆ ನೈತಿಕ ಸ್ಥೈರ್ಯ ತುಂಬಿದೆ.