ಕೋಮುದ್ವೇಷ ಹರಡುವ ವಿಡಿಯೊ ವೈರಲ್: ಮನ್ಸೂರ್ ಪತ್ನಿಗೆ 13 ಮಕ್ಕಳು ಎಂದ ಮುತಾಲಿಕ್
"ಮುಸ್ಲಿಮರ ಜನಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾದರೆ ನಮ್ಮ ಗತಿ ಏನು ?"

ಬೆಂಗಳೂರು, ಜು.18: ಸದಾ ಕೋಮು ಭಾವನೆ ಕೆರಳಿಸುವ ಭಾಷಣ ಮಾಡುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ನ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಪತ್ನಿಗೆ 13 ಜನ ಮಕ್ಕಳು ಎಂದು ಸುಳ್ಳು ಹಬ್ಬಿಸಿದ್ದಾರೆ.
ಯುವಕರಿಗೆ ಪ್ರಚೋದನಕಾರಿ ಉಪದೇಶ ನೀಡುವ ರೀತಿಯಲ್ಲಿರುವ ವಿಡಿಯೊದಲ್ಲಿ ಅವರು ಮುತಾಲಿಕ್, 15 ಸಾವಿರ ಕೋಟಿ ರೂ. ವಂಚನೆ ಮಾಡಿರುವ ಮನ್ಸೂರ್ ಖಾನ್‌ಗೆ ಮೂವರು ಪತ್ನಿಯರಿದ್ದು, 2ನೆ ಪತ್ನಿಗೆ 13 ಜನ ಮಕ್ಕಳಿದ್ದಾರೆ ಎಂದು ಹೇಳಿದ್ದಾರೆ.
ವಿಡಿಯೊ ಸಂಭಾಷಣೆ?: ಬೆಂಗಳೂರಿನಲ್ಲಿ ಐಎಂಎ ಪ್ರಕರಣದ ರೂವಾರಿ 15 ಸಾವಿರ ಕೋಟಿ ರೂ. ಟೋಪಿ ಹಾಕಿದ್ದಾನೆ. ಆತನಿಗೆ ಮೂರು ಪತ್ನಿಯರಿದ್ದು, ಎರಡನೇ ಪತ್ನಿಗೆ ಬರೋಬ್ಬರಿ 13 ಜನ ಮಕ್ಕಳಿದ್ದಾರೆ. ಇದರಲ್ಲಿ ಒಂದು ಕ್ರಿಕೆಟ್ ತಂಡ ಕಟ್ಟಬಹುದು.
ಇದು ಗಂಭೀರ ವಿಚಾರ, ದೇಶದಲ್ಲಿ ಮುಸ್ಲಿಮರು 18 ಸಾವಿರ ಕೋಟಿ ಜನಸಂಖ್ಯೆ ಇರುವಾಗಲೇ, ನಮ್ಮ ಕಾರ್ಯಕ್ರಮಗಳಿಗೆ ಅಡ್ಡಿ ಉಂಟು ಮಾಡುತ್ತಾರೆ. ಇವರು ಮುಂದಿನ ದಿನಗಳಲ್ಲಿ ಹೆಚ್ಚಾದರೆ ನಮ್ಮ ಗತಿ ಏನು.ಹಾಗಾಗಿ, ಇದರ ವಿರುದ್ಧ ಹೋರಾಟ ನಡೆಸಿ ಪ್ರಧಾನಿ, ಗಹ ಸಚಿವರಿಗೆ ಮನವಿ ಸಲ್ಲಿಸಬೇಕು.ಜೊತೆಗೆ, ಮನ್ಸೂರ್‌ಗೆ ಹೆಚ್ಚು ಮಕ್ಕಳಿರುವ ಬಗ್ಗೆ ಎಲ್ಲರಿಗೂ ಹೇಳಬೇಕು ಎಂದು ಮುತಾಲಿಕ್ ವಿಡಿಯೊದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
‘ಕಠಿಣ ಕ್ರಮ ಕೈಗೊಳ್ಳಿ’
ಸುಳ್ಳು ಹಬ್ಬಿಸಿ ಯುವಕರಲ್ಲಿ ಸದಾ ಕೋಮು ಭಾವನೆ ಕೆರಳಿಸುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.ಇಲ್ಲದಿದ್ದರೆ, ಇಂತಹ ಸುಳ್ಳುಗಳನ್ನೇ ನಂಬಿ, ಕೋಮುಗಲಭೆಗಳು ನಡೆಯಲಿವೆ.
-ಶೇರ್‌ಯಾರ್‌ಖಾನ್, ಬಿಎಸ್ಪಿರಾಜ್ಯ ಸಂಚಾಲಕ