ಬಿ.ಸಿ.ರೋಡ್: ಇಂದಿರಾ ಕ್ಯಾಂಟೀನ್ ಕಟ್ಟಡದ ತಡೆಗೋಡೆ ಕುಸಿತ
ಬಂಟ್ವಾಳ, ಜು. 19: ಭಾರಿ ಮಳೆಗೆ ಬಂಟ್ವಾಳ ಬಿ.ಸಿ.ರೋಡ್ನ ಇಂದಿರಾ ಕ್ಯಾಂಟೀನ್ ಕಟ್ಟಡದ ತಡೆಗೋಡೆ ಕುಸಿದಿದ್ದು, ಸುತ್ತಲಿನ ಕೆಸರು ನೀರು ಕ್ಯಾಂಟೀನ್ ಒಳಗೆ ನುಗ್ಗಿದ ಘಟನೆ ಶುಕ್ರವಾರ ನಡೆದಿದೆ.
ಕಂಪೌಂಡ್ ಗೋಡೆಯ ಹಿಂಬದಿಯಲ್ಲಿ ಮಳೆ ನೀರು ನಿಂತಿದ್ದು, ಅದರ ಒತ್ತಡಕ್ಕೆ ತಡೆಗೋಡೆ ಸಂಪೂರ್ಣ ಕುಸಿದಿದೆ. ಇದರಿಂದ ಎರಡು ಗಂಟೆಗಳಷ್ಟು ಸಮಯ ಕ್ಯಾಂಟೀನ್ ಆವರಣದಲ್ಲಿ ಮಳೆ ನೀರು ಒಂದು ಅಡಿಗಳಷ್ಟು ಎತ್ತರಕ್ಕೆ ತುಂಬಿದ್ದು, ಬಳಿಕ ಅದನ್ನು ಬಸಿದು ಹೋಗುವಂತೆ ಮಾಡಲಾಯಿತು. ಕಳೆದ ವರ್ಷದ ಡಿಸೆಂಬರ್ನಲ್ಲಷ್ಟೇ ಬಿ.ಸಿ.ರೋಡು ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿದ್ದು, ವರ್ಷದ ಮೊದಲೇ ತಡೆಗೋಡೆ ಕುಸಿದಿದೆ. ಕಳಪೆ ಕಾಮಗಾರಿಯಿಂದ ತಡೆಗೋಡೆ ಕುಸಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಾಹಿತಿ ತಿಳಿದು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮತ್ತು ಸಿಬ್ಬಂದಿ ಇಕ್ಬಾಲ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
Next Story