ಪ್ರತಿ ಮೂರು ನಿಮಿಷಕ್ಕೆ ಒಬ್ಬರು ಅಪಘಾತದಿಂದ ಮೃತ್ಯು: ಎಸ್ಸೈ ಮಧು
ರಸ್ತೆ ಸುರಕ್ಷತೆ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತ ಜಾಗೃತಿ ಕಾರ್ಯಕ್ರಮ

ಉಡುಪಿ, ಜು.19: ಮಲ್ಪೆ ಪೊಲೀಸ್ ಠಾಣೆ ಮತ್ತು ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ರಸ್ತೆ ಸುರಕ್ಷತೆ ಮತ್ತು ಮಾದಕ ದ್ರವ್ಯ ವ್ಯಸನದ ಕುರಿತ ಜಾಗೃತಿ ಕಾರ್ಯಕ್ರಮವನ್ನು ಜು.18ರಂದು ಹೂಡೆ ಸಾಲಿ ಹಾತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಲ್ಪೆ ಠಾಣಾಧಿಕಾರಿ ಮಧು ಮಾತನಾಡಿ, ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ಅಪಘಾತದಿಂದಾಗಿ ಸಾವು ಸಂಭವಿಸುತ್ತಿದ್ದು ಇದು ಗಂಭೀರ ವಿಷಯವಾಗಿದೆ. ಈ ಅಫಘಾತಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಪ್ರಾಯ ಪ್ರಬುದ್ಧರಾಗದ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ನಡೆಯುವ ಅಪಘಾತದ ಹೊಣೆ ಗಾರಿಕೆಯನ್ನು ಮಕ್ಕಳ ಪಾಲಕರ ಮೇಲೆ ನೀಡುವತೆ ನ್ಯಾಯಾಲಯ ಅನೇಕ ಬಾರಿ ತೀರ್ಪು ನೀಡಿದೆ. ಹಾಗೆಯೇ ಮಾದಕ ದ್ರವ್ಯದಿಂದಾಗಿ ಯುವ ಶಕ್ತಿ ಪತನಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಇದ್ರೀಸ್ ಹೂಡೆ ಮಾತನಾಡಿ, ಸಮಾಜ ಮತ್ತು ದೇಶದ ಉಜ್ವಲ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳು ಸಂಚಾರಿ ನಿಯಮಗಳ ಪಾಲನೆ ಮತ್ತು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮಕ್ಕಳು ಅಪಘಾತ ಅಥವಾ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾದರೆ ಪೋಷಕರ ಪ್ರೀತಿ ಮತ್ತು ಭವಿಷ್ಯದ ಕನಸುಗಳು ನುಚ್ಚು ನೂರಾಗುತ್ತದೆ. ಸಮಾಜದ ಸಂತುಲನ ಬಿಗಡಾಯಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ, ಸಾಲಿಹಾತ್ ಪ್ರೌಢಶಾಲಾ ಮುಖ್ಯಸ್ಥೆ ಸುನಂದಾ, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಲವಿನಾ ಕ್ಲಾರ ಮೊದಲಾದವರು ಉಪಸ್ಥಿತರಿದ್ದರು.







