ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ರಾಜ್ಯಾದ್ಯಾಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ

ಬೆಂಗಳೂರು, ಜು.19: ಉತ್ತರ ಪ್ರದೇಶದ ಸೋನಭದ್ರದಲ್ಲಿ ಭೂವಿವಾದ ಹಿನ್ನೆಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 9 ಜನರು ಸಾವನ್ನಪ್ಪಿ19 ಜನರು ಗಾಯಗೊಂಡಿದ್ದ ಕುಟುಂಬದವರನ್ನು ಭೇಟಿಯಾಗಲು ತೆರಳಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿರುವುದನ್ನು ಖಂಡಿಸಿ ರಾಜ್ಯಾದ್ಯಾಂತ ಪ್ರತಿಭಟನೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ಪಕ್ಷದ ಕಾರ್ಯಕರ್ತರು ಜಾಗೃತರಾಗಿ ರಾಜ್ಯದೆಲ್ಲೆಡೆ ಪ್ರತಿಭಟನೆಗೆ ಮುಂದಾಗಬೇಕು. ಕೇಂದ್ರ ಸರಕಾರದ ಕುಮ್ಮಕ್ಕಿನ ಮೇಲೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ್ದಾರೆ. ಈ ಮೂಲಕ ಅಲ್ಲಿನ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷವನ್ನು ರ್ದುಬಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕೆ ಕಾರ್ಯಕರ್ತರು ಅವಕಾಶ ಮಾಡಿಕೊಡಬಾರದು. ಸ್ವಾತಂತ್ರ ಪೂರ್ವದಿಂದಲೂ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಬಿಜೆಪಿ ಸಂಚು ರೂಪಿಸಿದೆ. ನಾವೆಲ್ಲಾ ಒಂದಾಗಿ ಈ ಪ್ರಯತ್ನ ತಡೆಯಬೇಕಿದೆ ಎಂದು ಕರೆ ನೀಡಿದರು.
ಪ್ರಿಯಂಕಾ ಗಾಂಧಿಯನ್ನು ಬಂಧಿಸಲಾಗಿದೆ. ರಾಹುಲ್ ಗಾಂಧಿಯನ್ನು ದುರ್ಬಲರು ಎಂಬಂತೆ ಬಿಂಬಿಸಲಾಗುತ್ತಿದೆ. ಇದನ್ನೆಲ್ಲಾ ನಮ್ಮ ಕಾರ್ಯಕರ್ತರು ತಡೆಯುವ ಕಾರ್ಯ ಮಾಡಬೇಕು. ಇದಕ್ಕಾಗಿ ರಾಜ್ಯಾದ್ಯಂತ ಗಂಭೀರ ಹೋರಾಟಕ್ಕೆ ಮುಂದಾಗಿ ಎಂದು ತಿಳಿಸಿದ್ದಾರೆ.