ಬೆಂಕಿಯ ಕೆನ್ನಾಲಿಗೆಯಿಂದ 19ನೇ ಮಹಡಿಯಿಂದ ಈ ನಿಜ ಸ್ಪೈಡರ್ಮನ್ ತಪ್ಪಿಸಿಕೊಂಡಿದ್ದು ಹೀಗೆ..
ಅಮೆರಿಕ, ಜು.20: ಅಮೆರಿಕದ ಫಿಲಿಡೆಲ್ಫಿಯಾದ ಗಗನಚುಂಬಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ವ್ಯಕ್ತಿಯೊಬ್ಬ 19ನೇ ಮಹಡಿಯಿಂದ ಇಳಿದು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡ ಬಗೆಗಿನ ನಂಬಲಸಾಧ್ಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ಆಗಿದೆ.
ವೆಸ್ಟ್ಪಾರ್ಕ್ ಅಪಾರ್ಟ್ಮೆಂಟ್ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ಮಾಹಿತಿ ನೀಡಿದರೂ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಪಂದಿಸಲು ವಿಳಂಬ ಮಾಡಿದರು ಎಂದು ಹೇಳಲಾಗಿದೆ. ಮೂರನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ಮೇಲಿನ ಮಹಡಿಗಳಿಗೆ ವ್ಯಾಪಿಸಿದೆ. ಆಗ 19ನೇ ಮಹಡಿಯಲ್ಲಿದ್ದ ವ್ಯಕ್ತಿಯೊಬ್ಬರು, ರಕ್ಷಣಾ ಕಾರ್ಯಕ್ಕೆ ಆಗಮಿಸಿದ್ದ ಹೆಲಿಕಾಪ್ಟರ್ಗಳ ಬೆಳಕಿನಲ್ಲಿ ಯಾರ ನೆರವು ಅಥವಾ ಯಾವುದೇ ಸಾಧನಗಳ ಸಹಾಯ ಇಲ್ಲದೇ 14 ಮಹಡಿಗಳನ್ನು ಕೇವಲ ಮೂರು ನಿಮಿಷಗಳ ಅವಧಿಯಲ್ಲಿ ಇಳಿದಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಅಂತಿಮವಾಗಿ ಆತ ಸುರಕ್ಷಿತವಾಗಿ ನೆಲ ತಲುಪಿದ್ದಾನೆ.
ಘಟನೆಯಲ್ಲಿ ಗಾಯಗೊಂಡ ಹಲವು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಕನಿಷ್ಠ ನಾಲ್ವರು ನಿವಾಸಿಗಳು ಹಾಗೂ ಮೂವರು ಪೊಲೀಸ್ ಅಧಿಕಾರಿಗಳು ಹೊಗೆ ಸೇವನೆಯಿಂದ ಆಗಿರುವ ಅಸ್ವಸ್ಥತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.