ಬ್ರಿಟನ್ ತೈಲ ಟ್ಯಾಂಕರ್ ಇರಾನ್ ವಶಕ್ಕೆ
ಲೈಬೀರಿಯದ ಇನ್ನೊಂದು ಹಡಗೂ ವಶ; ಬಳಿಕ ಬಿಡುಗಡೆ
ಟೆಹರಾನ್, ಜು. 20: ಇರಾನ್ನ ಸೇನಾ ಘಟಕ ‘ಇಸ್ಲಾಮಿಕ್ ರೆವಲೂಶನರಿ ಗಾರ್ಡ್ ಕಾರ್ಪ್ಸ್’ ಒಂದು ಬ್ರಿಟಿಶ್ ತೈಲ ಟ್ಯಾಂಕರ್ ಮತ್ತು ಲೈಬೀರಿಯ ಧ್ವಜ ಹೊಂದಿದ ಹಡಗೊಂದನ್ನು ಹೋರ್ಮುಝ್ ಜಲಸಂಧಿಯಲ್ಲಿ ಶುಕ್ರವಾರ ವಶಕ್ಕೆ ತೆಗೆದುಕೊಂಡಿದೆ.
ಜಲಸಂಧಿಯಲ್ಲಿ ‘ಅಂತರ್ರಾಷ್ಟ್ರೀಯ ಸಾಗರಯಾನ ನಿಯಮ’ಗಳನ್ನು ಉಲ್ಲಂಘಿಸಿರುವುದಕ್ಕಾಗಿ ‘ಸ್ಟೆನಾ ಇಂಪೇರೊ’ ಎಂಬ ಹಡಗನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಕಾರ್ಪ್ಸ್ ಹೇಳಿದೆ. ಪ್ರಪಂಚದ ಸಮುದ್ರದ ಮೂಲಕ ಹಾದು ಹೋಗುವ ತೈಲದ ಮೂರನೇ ಒಂದು ಭಾಗ ಇದೇ ಜಲಸಂಧಿಯ ಮೂಲಕ ಸಾಗುತ್ತದೆ.
ಇರಾನ್ ಕೊಲ್ಲಿಯಲ್ಲಿ ಎರಡು ಹಡಗುಗಳನ್ನು ವಶಪಡಿಸಿಕೊಂಡಿದೆ ಎಂದು ಬ್ರಿಟನ್ ಹೇಳಿದೆ. ಈ ವಿವಾದ ಶೀಘ್ರವಾಗಿ ಇತ್ಯರ್ಥಗೊಳ್ಳದಿದ್ದರೆ ‘ಗಂಭೀರ ಪರಿಣಾಮ’ಗಳನ್ನು ಎದುರಿಸಬೇಕಾಗುತ್ತದೆ ಎಂದು ಬ್ರಿಟನ್ ವಿದೇಶ ಕಾರ್ಯದರ್ಶಿ ಜೆರೆಮಿ ಹಂಟ್ ಎಚ್ಚರಿಸಿದ್ದಾರೆ.
ಇರಾನ್ ವಶಪಡಿಸಿಕೊಂಡಿರುವ ಎರಡನೇ ಹಡಗು ಲೈಬೀರಿಯದ ಧ್ವಜ ಹೊಂದಿರುವ ಬ್ರಿಟಿಶ್ ವ್ಯಕ್ತಿಯ ಮಾಲೀಕತ್ವದ ಹಡಗು ‘ಮೆಸ್ಡರ್’. ಈ ಹಡಗಿಗೆ ಸಶಸ್ತ್ರ ಸಿಬ್ಬಂದಿ ಹತ್ತಿದ್ದಾರೆ, ಆದರೆ, ಈ ಹಡಗು ಈಗ ಅಲ್ಲಿಂದ ಹೋಗಬಹುದಾಗಿದೆ ಹಾಗೂ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಅದರ ಮಾಲೀಕರು ಹೇಳಿದ್ದಾರೆ.
ಎರಡು ವಾರಗಳ ಹಿಂದೆ ಬ್ರಿಟನ್ ನೌಕಾಪಡೆಯು, ಸಿರಿಯದ ಮೇಲೆ ಐರೋಪ್ಯ ಒಕ್ಕೂಟ ವಿಧಿಸಿರುವ ದಿಗ್ಬಂಧನಗಳನ್ನು ಉಲ್ಲಂಘಿಸಿದೆ ಎಂಬ ಆರೋಪದಲ್ಲಿ ಜಿಬ್ರಾಲ್ಟರ್ ಕರಾವಳಿಯಲ್ಲಿ ಇರಾನ್ನ ತೈಲ ಹಡಗೊಂದನ್ನು ವಶಪಡಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಈ ಹಡಗಿನ ಸುಪರ್ದಿಯನ್ನು ಜಿಬ್ರಾಲ್ಟರ್ನ ನ್ಯಾಯಾಲಯವೊಂದು 30 ದಿನಗಳ ಕಾಲ ವಿಸ್ತರಿಸಿದ ಗಂಟೆಗಳ ಬಳಿಕ, ಇರಾನ್ ಈ ಕ್ರಮವನ್ನು ತೆಗೆದುಕೊಂಡಿದೆ.
►ಮೀನುಗಾರಿಕಾ ದೋಣಿಗೆ ಢಿಕ್ಕಿ ಹೊಡೆಯಿತೇ?
ಸೌದಿ ಅರೇಬಿಯಕ್ಕೆ ತೆರಳುತ್ತಿದ್ದ ಸ್ಟೆನಾ ಇಂಪೇರೊ ಮೀನುಗಾರಿಕಾ ದೋಣಿಯೊಂದಕ್ಕೆ ಢಿಕ್ಕಿ ಹೊಡೆದಿದೆ ಎಂದು ದಕ್ಷಿಣ ಇರಾನ್ನ ಬಂದರು ಬಂಡಾರ್ ಅಬ್ಬಾಸ್ನ ಅಧಿಕಾರಿಗಳು ಹೇಳಿದ್ದಾರೆ.
‘‘ಬ್ರಿಟನ್ನ ತೈಲ ಟ್ಯಾಂಕರ್ ತನ್ನ ದಾರಿಯಲ್ಲಿದ್ದ ಮೀನುಗಾರಿಕಾ ದೋಣಿಯೊಂದಕ್ಕೆ ಢಿಕ್ಕಿ ಹೊಡೆದಿದೆ. ಹಾಗಾಗಿ, ಅಪಘಾತವೊಂದು ಸಂಭವಿಸಿದ ಬಳಿಕ, ಕಾನೂನಿನಂತೆ ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸುವುದು ಅಗತ್ಯವಾಗಿದೆ’’ ಎಂದು ಹೊರ್ಮೊಝ್ಗನ್ ಪ್ರಾಂತದ ಬಂದರು ಮತ್ತು ಸಾಗರಯಾನ ಪ್ರಾಧಿಕಾರದ ಮಹಾನಿರ್ದೇಶಕ ಅಲ್ಲಾ ಮುರಾದ್ ಅಫಿಫಿಪೂರ್ ಹೇಳಿದರು.
►ತೈಲ ಟ್ಯಾಂಕರ್ನಲ್ಲಿ 18 ಭಾರತೀಯರು
ಸ್ವೀಡನ್ ವ್ಯಕ್ತಿಯ ಮಾಲೀಕತ್ವದ ಬ್ರಿಟನ್ ತೈಲ ಟ್ಯಾಂಕರ್ನಲ್ಲಿ 23 ಸಿಬ್ಬಂದಿಯಿದ್ದು, ಅವರೆಲ್ಲರೂ ಟ್ಯಾಂಕರ್ನಲ್ಲೇ ಇದ್ದಾರೆ.
ಸಿಬ್ಬಂದಿಯ ಪೈಕಿ 18 ಭಾರತೀಯರು, ಮೂವರು ರಶ್ಯನ್ನರು, ಓರ್ವ ಲಾತ್ವಿಯನ್ ಮತ್ತು ಓರ್ವ ಫಿಲಿಪಿನೊ.