ಅತೀ ಶ್ರೀಮಂತರಿಗೆ ತೆರಿಗೆ ಘೋಷಣೆ ಪ್ರಭಾವ: 7,712 ಕೋಟಿ ರೂ. ವಿದೇಶಿ ಹೂಡಿಕೆ ಹಿಂತೆಗೆತ
ಹೊಸದಿಲ್ಲಿ, ಜು.21: ಕೇಂದ್ರ ಸರಕಾರದ 2019-20ನೇ ಸಾಲಿನ ಬಜೆಟ್‌ನಲ್ಲಿ ‘ಸೂಪರ್ ರಿಚ್ ಟ್ಯಾಕ್ಸ್’ (ಅತೀ ಶ್ರೀಮಂತರಿಗೆ ತೆರಿಗೆ) ಘೋಷಿಸಿದ ಬಳಿಕ ಜುಲೈ ತಿಂಗಳಲ್ಲಿ ಇದುವರೆಗೆ ಭಾರತೀಯ ಷೇರು ಮಾರುಕಟ್ಟೆಯಿಂದ 7,712 ಕೋಟಿ ರೂ. ವಿದೇಶಿ ಹೂಡಿಕೆ ಹಿಂಪಡೆಯಲಾಗಿದೆ ಎಂದು ವರದಿ ತಿಳಿಸಿದೆ.
ಜುಲೈ 1ರಿಂದ 19ರವರೆಗಿನ ಅವಧಿಯಲ್ಲಿ ಷೇರು ಮಾರುಕಟ್ಟೆಯಿಂದ 7,712 ಕೋಟಿ ರೂ. ವಿದೇಶಿ ಹೂಡಿಕೆ ಹಿಂಪಡೆಯಲಾಗಿದೆ. ಆದರೆ ಇದೇ ವೇಳೆ ಸಾಲ ವಿಭಾಗದಲ್ಲಿ 9,371.12 ಕೋಟಿ ರೂ. ವಿದೇಶಿ ಹೂಡಿಕೆಯಾಗಿದೆ. ಈ ಮೂಲಕ , ಜುಲೈಯಲ್ಲಿ ಇದುವರೆಗೆ 1,659 ಕೋಡಿ ರೂ. ನಿವ್ವಳ ಹೂಡಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಸರಕಾರ ಬಜೆಟ್‌ನಲ್ಲಿ ಸೂಪರ್ ರಿಚ್ ಟ್ಯಾಕ್ಸ್ ತೆರಿಗೆ ಘೋಷಿಸಿದಂದಿನಿಂದ ವಿದೇಶಿ ಹೂಡಿಕೆದಾರರು ಮಾರಾಟದ ಧಾವಂತದಲ್ಲಿದ್ದಾರೆ. ನಂತರವೂ ಸರಕಾರದಿಂದ ವಿನಾಯಿತಿಯ ಲಕ್ಷಣ ಕಂಡು ಬರದಿರುವುದರಿಂದ ನಿವ್ವಳ ಹೊರಹರಿವಿನ ಪ್ರಮಾಣ ಅಧಿಕಗೊಂಡಿದೆ ಎಂದು ಹಿರಿಯ ವಿಶ್ಲೇಷಣಾ ತಜ್ಞ ಹಿಮಾಂಷು ಶ್ರೀವಾಸ್ತವ ಹೇಳಿದ್ದಾರೆ. ನೀರಸ ಆದಾಯದ ಋತು, ನಿಧಾನಗತಿಯ ಜಿಡಿಪಿ ಬೆಳವಣಿಗೆ ದರ, ಮುಂಗಾರು ಮಳೆಯ ಕೊರತೆ, ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಭಾರತದ ಅಭಿವೃದ್ಧಿ ದರ ಕಡಿಮೆಯಾಗಲಿದೆ ಎಂದು ಮುನ್ಸೂಚನೆ ನೀಡಿರುವುದು ಕೂಡಾ ವಿದೇಶಿ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ ಎಂದವರು ಹೇಳಿದ್ದಾರೆ.







