ಫಿಟ್ನೆಸ್ ಕುರಿತ ಈ ನಂಬಿಕೆಗಳು ನಿಜಕ್ಕೂ ಮಿಥ್ಯೆಗಳು
ಫಿಟ್ನೆಸ್ ಅಥವಾ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಹೆಚ್ಚಿನವರು ಬಯಸುತ್ತಾರೆ.
ಇದಕ್ಕಾಗಿ ಜಾಗಿಂಗ್, ವ್ಯಾಯಾಮ ಸೇರಿದಂತೆ ಹಲವಾರು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಫಿಟ್ನೆಸ್ ಕುರಿತಂತೆ ಹೆಚ್ಚಿನವರು ಕೆಲವು ಟಿಪ್ಸ್ ಅನುಸರಿಸುತ್ತಿರುತ್ತಾರೆ,ಆದರೆ ನಿಜಕ್ಕೂ ಇವುಗಳಲ್ಲಿ ಯಾವುದೇ ಹುರುಳಿರುವುದಿಲ್ಲ ಮತ್ತು ಅವು ಕೇವಲ ಮಿಥ್ಯೆಗಳಾಗಿರುತ್ತವೆ.
ಶರೀರದ ಕ್ಷಮತೆಯನ್ನು ಕಾಯ್ದುಕೊಳ್ಳುವುದು ಅಗತ್ಯ ಮತ್ತು ನೀವು ಫಿಟ್ನೆಸ್‌ನ್ನು ನಿಮ್ಮ ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು ಮುಖ್ಯ. ಆದರೆ ಫಿಟ್ನೆಸ್ ಕುರಿತು ಅವರಿವರು ಹೇಳುವ ಮಾತುಗಳನ್ನು ನಂಬಬೇಕಿಲ್ಲ. ಇಲ್ಲಿವೆ ನಾವು ನಂಬುತ್ತ ಬಂದಿರುವ ಫಿಟ್ನೆಸ್ ಕುರಿತು ಕೆಲವು ಮಿಥ್ಯೆಗಳು.....
►ಕಾರ್ಡಿಯೊ ವ್ಯಾಯಾಮದಿಂದ ದೇಹತೂಕ ಇಳಿಯುತ್ತದೆ
ಹೃದಯ ಬಡಿತ ದರವನ್ನು ಹೆಚ್ಚಿಸುವ ಕೈಕಾಲುಗಳ ಚಲನವಲನಗಳಿಂದ ಕೂಡಿದ ನಡಿಗೆ,ಓಟ,ಈಜುವಿಕೆ,ಹಗ್ಗಜಿಗಿತ ಇತ್ಯಾದಿಗಳನ್ನು ಕಾರ್ಡಿಯೊ ವ್ಯಾಯಾಮ ಎಂದು ಕರೆಯಲಾಗುತ್ತದೆ. ಜಿಮ್‌ಗಳಲ್ಲಿಯೂ ಟ್ರೆಡ್‌ಮಿಲ್ ಸೇರಿದಂತೆ ಹಲವಾರು ವಿಧಗಳ ಕಾರ್ಡಿಯೊ ಉಪಕರಣಗಳಿರುತ್ತವೆ. ಶರೀರದ ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳುವ ಉದ್ದೇಶದಿಂದ ನೀವು ಹಗಲಿರುಳೂ ಕಾರ್ಡಿಯೊ ಮಾಡುತ್ತಿದ್ದರೆ ನಿಮಗೆ ನಿರಾಶೆ ಕಾದಿದೆ. ಕಾರ್ಡಿಯೊ ಕೆಲವು ಕೆಜಿಗಳಷ್ಟು ತೂಕವನ್ನು ತಗ್ಗಿಸುತ್ತದೆ ನಿಜ,ಆದರೆ ಅದು ನಿಮ್ಮನ್ನು ಸ್ಲಿಮ್ ಆಗಿಸುವ ಸಾಧ್ಯತೆ ತುಂಬ ಕಡಿಮೆ ಅಥವಾ ಅಂತಹ ಸಾಧ್ಯತೆ ಇಲ್ಲವೇ ಇಲ್ಲ. ನೀವು ಸ್ಲಿಮ್ ಆಗಬೇಕೆಂದರೆ ಕ್ಯಾಲರಿಗಳನ್ನು ನಿಯಂತ್ರಿಸಲು ಸೂಕ್ತವಾದ ಆಹಾರ ಕ್ರಮವನ್ನು ಅನುಸರಿಸಬೇಕಾಗುತ್ತದೆ. ದೇಹದ ತೂಕವನ್ನು ತಗ್ಗಿಸಲು ಕಾರ್ಡಿಯೊದ ಜೊತೆಗೆ ಸ್ನಾಯುಗಳ ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸುವ ಸೀಟೆಡ್ ಚೆಸ್ಟ್ ಪ್ರೆಸ್ ಅಥವಾ ಡಂಬೆಲ್ಸ್/ಬಾರ್ ಪ್ರೆಸ್‌ನಂತಹ ರಸಿಸ್ಟನ್ಸ್ ಟ್ರೇನಿಂಗ್ ವ್ಯಾಯಾಮವನ್ನ್ನೂ ಮಾಡಬೇಕಾಗುತ್ತದೆ.
►ಜಿಮ್‌ಗೆ ಹೋಗುವವರು ಕಡ್ಡಾಯವಾಗಿ ಪ್ರೋಟಿನ್ ಶೇಕ್ ಸೇವಿಸಬೇಕು
ಹೆಚ್ಚಿನ ಜಿಮ್ ಉತ್ಸಾಹಿಗಳು ಜಿಮ್‌ಗೆ ತೆರಳುವ ಮುನ್ನ ಮತ್ತು ನಂತರ ಪ್ರೋಟಿನ್ ಶೇಕ್ ಸೇವಿಸುತ್ತಾರೆ,ಆದರೆ ಇದು ಕಡ್ಡಾಯವೇನಲ್ಲ. ನೀವು ನಿಮ್ಮ ಶರೀರದ ಪ್ರೋಟಿನ್ ಅಗತ್ಯವನ್ನು ನಿಯಮಿತ ಊಟಗಳ ಮೂಲಕ ಪೂರೈಸಿಕೊಳ್ಳುತ್ತಿದ್ದರೆ ಪ್ರೋಟಿನ್ ಶೇಕ್‌ಗಳನ್ನು ಸೇವಿಸುವ ಅಗತ್ಯವೇ ಇರುವುದಿಲ್ಲ. ಚಿಕನ್,ಮೀನು,ಟೋಫು ಇತ್ಯಾದಿಗಳಂತಹ ಪ್ರೋಟಿನ್ ಸಮೃದ್ಧ ಆಹಾರಗಳ ಸೇವನೆ ಪ್ರೋಟಿನ್ ಪೂರಕಗಳಿಗೆ ಆರೋಗ್ಯಕರ ಪರ್ಯಾಯಗಳಾಗಿವೆ ಎನ್ನುವುದು ಪೋಷಕಾಂಶ ತಜ್ಞರ ಸಲಹೆಯಾಗಿದೆ.
►ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ತ್ವರಿತ ಮತ್ತು ಉತ್ತಮ ಪರಿಣಾಮವನ್ನು ನೀಡುತ್ತದೆ
ನಿಮ್ಮ ಶರೀರದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಲು ನೀವು ಬಯಸಿದ್ದರೆ ಖಾಲಿ ಹೊಟ್ಟೆಯಲ್ಲೆಂದಿಗೂ ವ್ಯಾಯಾಮವನ್ನು ಮಾಡಬೇಡಿ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮಕ್ಕೆ ಆದ್ಯತೆ ನೀಡುವವರ ಪಾಲಿಗೆ ಇದು ಆಘಾತಕಾರಿ ಮಾಹಿತಿಯಾಗಬಹುದು. ಪೋಷಕಾಂಶಗಳ ಕೊರತೆಯಿಂದ ನಿಮ್ಮ ಶರೀರವು ಕೊಬ್ಬನ್ನು ದಹಿಸಲು ಸಾಧ್ಯವಾಗುವುದಿಲ್ಲ,ಬದಲಿಗೆ ಅದು ಸ್ನಾಯುಗಳನ್ನು ಹೆಚ್ಚು ಕರಗಿಸುತ್ತದೆ.
►ಬೆವರುವಿಕೆಯು ಕೊಬ್ಬು ಕರಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ ಈ ಹೇಳಿಕೆಯು ಶೇ.100ರಷ್ಟು ಸತ್ಯವಲ್ಲ ಎಂದರೆ ಕೆಲವರಿಗೆ ಅಸಮಾಧಾನವಾಗಬಹುದು. ಬೆವರುವಿಕೆಯು ನಿಮ್ಮ ಶರೀರಕ್ಕೆ ಒಳ್ಳೆಯದಾದರೂ ಅದಕ್ಕೂ ಕ್ಯಾಲರಿಗಳು ಕರಗುವುದಕ್ಕೂ ಯಾವುದೇ ಸಂಬಂಧವಿಲ್ಲ. ನಿಮ್ಮ ಶರೀರದ ಉಷ್ಣತೆಯು ಹೆಚ್ಚಿದಾಗೆಲ್ಲ ಅದನ್ನು ತಗ್ಗಿಸಲು ಬೆವರುಂಟಾಗುತ್ತದೆ. ಹೀಗಾಗಿ ಮುಂದಿನ ಬಾರಿ ನೀವು ಅತಿಯಾಗಿ ಬೆವರಿದರೆ ನಿಮ್ಮ ಶರೀರದ ಉಷ್ಣತೆ ಹೆಚ್ಚಿದೆ ಎನ್ನುವುದನ್ನು ಅದು ಸೂಚಿಸುತ್ತದೆಯೇ ಹೊರತು ಹೆಚ್ಚುವರಿ ಕ್ಯಾಲರಿಗಳ ದಹನವಲ್ಲ ಎನ್ನುವುದು ನಿಮಗೆ ಗೊತ್ತಿರಲಿ.
►ಓಡುವುದರಿಂದ ಮಂಡಿಗಳಿಗೆ ಹಾನಿಯಾಗಬಹುದು
ಓಡುವುದರಿಂದ ಮಂಡಿಗಳಿಗೆ ಹಾನಿಯಾಗಬಹುದು ಎಂದು ಯಾರಾದರೂ ಹೇಳಿದರೆ ಅದನ್ನೆಂದಿಗೂ ನಂಬಬೇಡಿ. ನೀವು ವ್ಯಾಯಾಮದ ಬಗ್ಗೆ ನಿಜವಾದ ಆಸಕ್ತಿ ಹೊಂದಿದ್ದರೆ ಮತ್ತು ಓಡಲು ಎಲ್ಲ ಅಗತ್ಯಗಳ ಬಗ್ಗೆ ನೀವು ಕಾಳಜಿ ವಹಿಸಿದ್ದರೆ ಅದಕ್ಕಿಂತ ಸುಲಭ ಮತ್ತು ಉತ್ತಮ ವ್ಯಾಯಾಮ ಇನ್ನೊಂದಿಲ್ಲ.
►ಜಿಮ್‌ನಲ್ಲಿ ಹೆಚ್ಚಿನ ಭಾರ ಎತ್ತುವಿಕೆಯಿಂದ ಸ್ಥೂಲಕಾಯರಾಗುತ್ತಾರೆ
ಇದು ಸ್ವಲ್ಪ ಮಟ್ಟಿಗೆ ನಿಜವಾಗಿದ್ದರೂ ಈ ಗ್ರಹಿಕೆಯು ಸಂಪೂರ್ಣ ನಿಖರವಲ್ಲ. ಕೆಲವರ ಮಟ್ಟಿಗೆ ಈ ಸಿದ್ಧಾಂತ ನಿಜವಾಗಬಹುದು,ಆದರೆ ಹೆಚ್ಚಿನವರ ಪಾಲಿಗೆ ಹೆಚ್ಚಿನ ಭಾರ ಎತ್ತುವುದು ವಾಸ್ತವದಲ್ಲಿ ದೇಹತೂಕವನ್ನು ಕಡಿಮೆ ಮಾಡುತ್ತದೆ. ವಾಸ್ತವದಲ್ಲಿ ಈ ವ್ಯಾಯಾಮವು ಕಾರ್ಡಿಯೊಕ್ಕಿಂತ ಹೆಚ್ಚಿನ ಕೊಬ್ಬನ್ನು ಕರಗಿಸುತ್ತದೆ.
►ಕೊಬ್ಬನ್ನು ಸ್ನಾಯುವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ
ಕೊಬ್ಬು ಮತ್ತು ಸ್ನಾಯುಗಳು ಪರಸ್ಪರ ಸಂಪೂರ್ಣ ವಿಭಿನ್ನವಾಗಿವೆ. ಕೊಬ್ಬನ್ನು ಸ್ನಾಯುವನ್ನಾಗಿ ಪರಿವರ್ತಿಸುವುದು ಸುಲಭವಲ್ಲವಾದರೂ ಅದು ಅಸಾಧ್ಯವೇನಲ್ಲ. ಭಾರ ಎತ್ತುವಿಕೆಯ ವ್ಯಾಯಾಮಗಳನ್ನು ಮಾಡುವ ಮೂಲಕ ನೀವು ಏಕಕಾಲದಲ್ಲಿ ಕೊಬ್ಬನ್ನು ಕರಗಿಸಬಹುದು ಮತ್ತು ಸ್ನಾಯುಗಳನ್ನು ರೂಪಿಸಿಕೊಳ್ಳಬಹುದು.