ರಿಷಭ್ ಪಂತ್ ಬೆಂಬಲಕ್ಕೆ ಎಂಎಸ್‌ಕೆ

ಮುಂಬೈ, ಜು.21: ಮಹೇಂದ್ರ ಸಿಂಗ್ ಧೋನಿ ಉತ್ತರಾಧಿಕಾರಿಯಾಗಿ ಎಲ್ಲ ಮಾದರಿಯ ಕ್ರಿಕೆಟ್‌ಗೂ ರಿಷಭ್ ಪಂತ್ ಅವರನ್ನು ರೂಪಿಸಲು ಆಯ್ಕೆ ಸಮಿತಿ ಚಿಂತನೆ ನಡೆಸಿದೆ.
ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರು ರಿಷಭ್ ಪಂತ್ ಬೆನ್ನಿಗೆ ನಿಂತಿದ್ದಾರೆ. ಧೋನಿ ಈ ತನಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿಲ್ಲ. ಕಳೆದ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನಿರ್ಗಮಿಸಿದ ಬಳಿಕ ಮಹೇಂದ್ರ ಸಿಂಗ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಧೋನಿ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಲಭ್ಯರಿಲ್ಲವೆಂದು ಹೇಳುವ ಮೂಲಕ ನಿವೃತ್ತಿಯ ವದಂತಿಗಳಿಗೆ ಅಂತಿಮ ತೆರೆ ಎಳೆದಿದ್ದಾರೆ.
ಪ್ಯಾರಾಚೂಟ್ ರೆಜಿಮೆಂಟ್‌ನಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ ಟೀಮ್ ಇಂಡಿಯಾದಿಂದ ದೂರ ಉಳಿದು ಎರಡು ತಿಂಗಳುಗಳ ಕಾಲ ಪ್ಯಾರಾಮಿಲಿಟರಿ ರೆಜಿಮೆಂಟ್‌ನಲ್ಲಿ ತನ್ನ ಕರ್ತವ್ಯ ನಿರ್ವಹಿಸಲಿದ್ದಾರೆ. ಭಾರತ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ನಿರ್ಗಮಿಸಿದ ಬಳಿಕ 38ರ ಹರೆಯದ ಧೋನಿ ನಿವೃತ್ತರಾಗುತ್ತಾರೆಂಬ ವದಂತಿ ಹಬ್ಬಿತ್ತು. ಆದರೆ ಧೋನಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೆ ಗೊಂದಲ ಉಂಟಾಗಿತ್ತು. ಕೊನೆಗೂ ಧೋನಿ ವೌನ ಮುರಿದು ಕ್ರಿಕೆಟ್‌ನಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.
‘‘ನಿವೃತ್ತಿ ವೈಯಕ್ತಿಕ ನಿರ್ಧಾರ. ಧೋನಿ ಯಾವಾಗ ನಿವೃತ್ತಿಯಾಗಬೇಕೆಂದು ಚೆನ್ನಾಗಿ ಅರಿತುಕೊಂಡಿದ್ದಾರೆ. ನಾವು ಈ ಬಗ್ಗೆ ಏನನ್ನು ಹೇಳಲು ಸಾಧ್ಯವಿಲ್ಲ. ಅವರು ವಿಂಡೀಸ್ ಸರಣಿಗೆ ಲಭ್ಯರಿಲ್ಲವೆಂದು ತಿಳಿಸಿದ್ದಾರೆ. ನಾವು ಯುವ ಕ್ರಿಕೆಟಿಗರನ್ನು ತಯಾರು ಮಾಡುವ ಚಿಂತನೆ ನಡೆಸಿದ್ದೇವೆ’’ ಎಂದು ಎಂಎಸ್‌ಕೆ ಪ್ರಸಾದ್ ತಿಳಿಸಿದ್ದಾರೆ.
ಪಂತ್ ಕಳೆದ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 32 ರನ್ ಗಳಿಸಿದ್ದರು. ಅವರ ಈ ಆಟದ ಬಗ್ಗೆ ಎಂಎಸ್‌ಕೆ ಪ್ರಸಾದ್ ಶ್ಲಾಘಿಸಿದ್ದಾರೆ.







