ಬೆಂಗಳೂರು ಬುಲ್ಸ್ ಗೆ ಹೀನಾಯ ಸೋಲು
ಪ್ರೊ ಕಬಡ್ಡಿ

ಹೈದರಾಬಾದ್, ಜು. 21: ಹಾಲಿ ಚಾಂಪಿಯನ್ ಬೆಂಗಳೂರು ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಮೂರನೇ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದೆ.
ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ 42-24 ಅಂತರದಲ್ಲಿ ಬೆಂಗಳೂರು ತಂಡಕ್ಕೆ ಸೋಲುಣಿಸಿತು.
ತನ್ನ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ 34-32 ಅಂತರದಲ್ಲಿ ರೋಚಕ ಜಯ ದಾಖಲಿಸಿದ್ದ ಬೆಂಗಳೂರು ತಂಡಕ್ಕೆ ಗುಜರಾತ್‌ನ ಪ್ರಬಲ ಹೋರಾಟದ ಮುಂದೆ ಏನನ್ನು ಮಾಡಲು ಸಾಧ್ಯವಾಗಿದೆ ಕೈ ಸುಟ್ಟುಕೊಂಡಿತು. ಕಳೆದ ಆವೃತ್ತಿಯಲ್ಲಿ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಗುಜರಾತ್ ಸೇಡು ತೀರಿಸಿಕೊಂಡಿತು.
ಪ್ರಥಮಾರ್ಧದ 10 ನಿಮಿಷಗಳಲ್ಲಿ 4-6 ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಬುಲ್ಸ್ ತಂಡ ಬಳಿಕ ಅಂಕ ಗಳಿಸಲು ಪರದಾಡಿತು. 20 ನಿಮಿಷ ಕೊನೆಗೊಂಡಾಗ 10-21 ಅಂತರದಲ್ಲಿ ಬುಲ್ಸ್ ಹಿನ್ನಡೆ ಅನುಭವಿಸಿತ್ತು. ದ್ವಿತೀಯಾರ್ಧದಲ್ಲಿ ಸ್ಟಾರ್ ರೈಡರ್ ಪವನ್ ಒಂದೇ ರೈಡ್‌ನಲ್ಲಿ 4 ಅಂಕಗಳನ್ನು ಬಾಚಿಕೊಂಡು ತಿರುಗೇಟು ನೀಡಿದರು. ಆದರೆ ನಾಯಕ ರೋಹಿತ್ ವೈಫಲ್ಯ ತಂಡಕ್ಕೆ ಹಿನ್ನಡೆ ಉಂಟಾಗಲು ಕಾರಣವಾಯಿತು. 33 ನಿಮಿಷಗಳಲ್ಲಿ ಮೂರು ಬಾರಿ ಆಲೌಟಾಗಿದ್ದ ಬೆಂಗಳೂರು ಬುಲ್ಸ್ 21-36 ಅಂತರದಲ್ಲಿ ಹಿನ್ನಡೆ ಅನುಭವಿಸಿತು. ಬಳಿಕ ಚೇತರಿಸಿಕೊಳ್ಳಲಿಲ್ಲ.
ಗುಜರಾತ್ ತಂಡದ ಸಚಿನ್ 7 ಅಂಕಗಳು, ಸುನೀಲ್ ಮತ್ತು ಮೋರೆ ತಲಾ 6ಂಕಗಳನ್ನು ಜಮೆ ಮಾಡಿದರು. ಬೆಂಗಳೂರು ಬುಲ್ಸ್‌ನ ಪವನ್ ಸೆಹ್ರಾವತ್ 13 ರೈಡ್‌ಗಳಲ್ಲಿ 8 ಅಂಕಗಳನ್ನು ಗಳಿಸಿದರು.







