ಇಡೀ ದೇಶದ ಜನರ ಮಾಹಿತಿಗೆ ಕನ್ನ!
ಬಲ್ಗೇರಿಯಾ, ಜು.22: ದೇಶದ ತೆರಿಗೆ ಕಂದಾಯ ಕಚೇರಿಯಿಂದ 50 ಲಕ್ಷಕ್ಕೂ ಹೆಚ್ಚು ನಾಗರಿಕರ ವೈಯಕ್ತಿಕ ಮಾಹಿತಿಗಳಿಗೆ ಹ್ಯಾಕರ್ಗಳು ಕನ್ನ ಹಾಕಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಬಲ್ಗೇರಿಯಾ ದೇಶದ ಒಟ್ಟು 70 ಲಕ್ಷ ನಾಗರಿಕರ ಪೈಕಿ 50 ಲಕ್ಷ ಮಂದಿಯ ಮಾಹಿತಿಗಳು ಸೋರಿಕೆಯಾಗಿದ್ದು, ದೇಶದ ಬಹುತೇಕ ಎಲ್ಲ ಉದ್ಯೋಗಿಗಳ ಮಾಹಿತಿಗಳು ಹ್ಯಾಕ್ ಆಗಿವೆ.
"ನಾವೆಲ್ಲ ಸಿಡಿದೇಳಬೇಕು; ಇದೀಗ ಎಲ್ಲರಿಗೂ ಮುಕ್ತವಾಗಿ ನಮ್ಮ ಮಾಹಿತಿ ಸಿಗುತ್ತಿದೆ. ಬಲ್ಗೇರಿಯಾದಲ್ಲಿ ಬಹಳಷ್ಟು ಮಂದಿ ಈಗಾಗಲೇ ಈ ಮಾಹಿತಿ ಹೊಂದಿದ್ದಾರೆ. ಹೀಗೆ ಮಾಹಿತಿ ಪಡೆದವರು ಬಲ್ಗೇರಿಯಾದವರು ಮಾತ್ರವಲ್ಲ" ಎಂದು ಬ್ಲಾಗ್ ಬರಹಗಾರ ಹಾಗೂ ರಾಜಕೀಯ ವಿಶ್ಲೇಷಕ ಜೆನೋವ್ ಹೇಳಿದ್ದಾರೆ. ಇವರು ಐಟಿ ತಜ್ಞರಲ್ಲದಿದ್ದರೂ, ಹ್ಯಾಕ್ ಆದ ಮಾಹಿತಿಗಳು ಆನ್ಲೈನ್ನಲ್ಲಿ ಗಮನಕ್ಕೆ ಬಂದಿರುವುದರಿಂದ ಈ ಮಾಹಿತಿ ಸೋರಿಕೆಯಾಗಿರುವುದು ಬೆಳಕಿಗೆ ಬಂದಿದೆ.
ಸರ್ಕಾರಿ ದತ್ತಾಂಶಗಳು ಹ್ಯಾಕರ್ಗಳಿಗೆ ಚಿನ್ನದ ಗಣಿ ಇದ್ದಂತೆ. ಮುಂದಿನ ವರ್ಷಗಳಲ್ಲಿ ಉಪಯುಕ್ತವಾಗುವ ಮಾಹಿತಿಗಳ ದೊಡ್ಡ ನಿಧಿ ಇದು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಜನ್ಮದಿನಾಂಕ ಬದಲಾಗದು; ಖಾಯಂ ವಾಸದ ಮನೆ ಬದಲಾಗದು; ಆದ್ದರಿಂದ ಹ್ಯಾಕ್ ಮಾಡಲಾದ ಬಹಳಷ್ಟು ಮಾಹಿತಿಗಳು ಐದು, ಹತ್ತು, ಇಪ್ಪತ್ತು ವರ್ಷಗಳಿಗೂ ಪ್ರಸ್ತುತವಾಗಿರುತ್ತವೆ ಎಂದು ಅಭಿಪ್ರಾಯಪಡುತ್ತಾರೆ.
ಹೀಗೆ ಹಲವು ದೇಶಗಳಲ್ಲಿ ಮಾಹಿತಿಗಳು ಹ್ಯಾಕ್ ಆಗುತ್ತಿದ್ದು, ಅಮೆರಿಕದ ಹಿರಿಯ ಯೋಧರ ವ್ಯವಹಾರಗಳ ಇಲಾಖೆಯ ಮಾಹಿತಿಗೆ 2006ರಲ್ಲೇ ಕನ್ನ ಹಾಕಲಾಗಿತ್ತು. ಆಗ ಸುಮಾರು 26 ದಶಲಕ್ಷ ಯೋಧರ ಹಾಗೂ ನಿವೃತ್ತ ಯೋಧರ ಮಾಹಿತಿಗಳು ಸೋರಿಕೆಯಾಗಿದ್ದವು.
ಬಲ್ಗೇರಿಯಾ ಹ್ಯಾಕ್ಗೆ ಸಂಬಂಧಿಸಿದಂತೆ 20 ವರ್ಷದ ಸೈಬರ್ ಭದ್ರತಾ ಕಾರ್ಯಕರ್ತನನ್ನು ಬಂಧಿಸಲಾಗಿದೆ. ದಾಳಿಗೆ ಬಳಸಲಾದ ಕಂಪ್ಯೂಟರ್ ಹಾಗೂ ಸಾಫ್ಟ್ವೇರ್ ಆಧಾರದಲ್ಲಿ ಶಂಕಿತನನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ. ಕಳೆದ ವರ್ಷ ಬಲ್ಗೇರಿಯಾದಲ್ಲಿ ವಾಣಿಜ್ಯ ರಿಜಿಸ್ಟ್ರಿ ಕೂಡಾ ಇದೇ ರೀತಿ ಹ್ಯಾಕ್ ಆಗಿತ್ತು.