ಜೈ ಶ್ರೀರಾಮ್ ಹೇಳುವಂತೆ ಡೆಲಿವರಿ ಬಾಯ್, ಗೆಳೆಯನಿಗೆ ಬಲವಂತ, ಬೆದರಿಕೆ

ಔರಂಗಾಬಾದ್,ಜು.22: ‘ಜೈ ಶ್ರೀರಾಮ್’ ಎಂದು ಹೇಳುವಂತೆ ಆಹಾರ ಡೆಲಿವರಿ ಯುವಕ ಮತ್ತು ಆತನ ಗೆಳೆಯನ ಮೇಲೆ ಅಪರಿಚಿತ ವ್ಯಕ್ತಿಗಳು ಒತ್ತಾಯಪಡಿಸಿ ಬೆದರಿಕೆ ಹಾಕಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ನಡೆದ ಎರಡನೇ ಇಂತಹ ಘಟನೆಯಾಗಿದೆ. ಪೊಲೀಸರ ಪ್ರಕಾರ, ಝೊಮ್ಯಾಟೊ ಆ್ಯಪ್‌ನ ಆಹಾರ ಹಂಚಿಕೆ ಮಾಡುವ ಯುವಕ 24ರ ಹರೆಯದ ಶೇಕ್ ಆಮಿರ್ ಮತ್ತು ಆತನ ಗೆಳೆಯ 26ರ ಹರೆಯದ ಶೇಕ್ ನಾಸಿರ್ ಆಟೋ ರಿಕ್ಷಾಕ್ಕಾಗಿ ಕಾದು ನಿಂತಿದ್ದಾಗ ಅಲ್ಲಿಗೆ ಕಾರಿನಲ್ಲಿ ಆಗಮಿಸಿದ ಐವರು ಆಮಿರ್ ಮತ್ತು ನಾಸಿರ್‌ನನ್ನು ತಡೆದು ಅವರ ಧರ್ಮವನ್ನು ಉಲ್ಲೇಖಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮಾತ್ರವಲ್ಲದೆ ‘ಜೈ ಶ್ರೀರಾಮ್’ ಎಂದು ಹೇಳದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಭಯದಿಂದ ಇಬ್ಬರು ‘ಜೈ ಶ್ರೀರಾಮ್’ ಎಂದು ಹೇಳಿದ್ದಾರೆ ನಂತರ ಆ ರಸ್ತೆಯಲ್ಲಿ ಸಾಗುತ್ತಿದ್ದ ಜನರನ್ನು ಕಂಡ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಔರಂಗಾಬಾದ್‌ನ ಆಝಾದ್ ಚೌಕ್ ಬಳಿ ನಡೆದ ಘಟನೆಯ ಹಿನ್ನೆನೆಯಲ್ಲಿ ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನತೆ ಉಂಟಾದ ಪರಿಣಾಮ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಸಂತ್ರಸ್ತರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಪ್ಪಿತಸ್ಥರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.







