ಪಕ್ಷಕ್ಕೆ ಮುಜುಗರ ತಂದ ಪ್ರಜ್ಞಾ ಸಿಂಗ್ ಗೆ ಬಿಜೆಪಿ ಕಾರ್ಯಾಧ್ಯಕ್ಷ ನಡ್ಡಾ ತರಾಟೆ

ಹೊಸದಿಲ್ಲಿ,ಜು.22: ತಾನು ಲೋಕಸಭೆಗೆ ಆಯ್ಕೆಯಾಗಿರುವುದು ಟಾಯ್ಲೆಟ್‌ಗಳನ್ನು ಸ್ವಚ್ಛಗೊಳಿಸಲಲ್ಲ ಎಂಬ ಹೇಳಿಕೆಗಾಗಿ ಭೋಪಾಲ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಸೋಮವಾರ ತರಾಟೆಗೆತ್ತಿಕೊಂಡಿದ್ದಾರೆ. ಠಾಕೂರ್ ನೀಡಿದ್ದ ಈ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಚ್ಛ ಭಾರತ’ ಅಭಿಯಾನವನ್ನು ಅಣಕಿಸುವಂತಿದ್ದು,ಬಿಜೆಪಿಯ ಮುಜುಗರಕ್ಕೆ ಕಾರಣವಾಗಿದೆ.
ಠಾಕೂರ್ ಅವರನ್ನು ಬಿಜೆಪಿ ಕೇಂದ್ರ ಕಚೇರಿಗೆ ಕರೆಸಿಕೊಂಡ ನಡ್ಡಾ,ಆಕೆಯ ಹೇಳಿಕೆಯ ಬಗ್ಗೆ ಪಕ್ಷದ ನಾಯಕತ್ವದ ಅಸಮಾಧಾನವನ್ನು ತಿಳಿಸಿದರು. ಪ್ರಜ್ಞಾ ಸಿಂಗ್ ರನ್ನು ತರಾಟೆಗೆತ್ತಿಕೊಂಡ ಅವರು ಪಕ್ಷದ ಕಾರ್ಯಕ್ರಮಗಳು ಮತ್ತು ಸಿದ್ಧಾಂತಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುವುದರಿಂದ ದೂರವಿರುವಂತೆ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದವು.
ಠಾಕೂರ್ ಬಿಜೆಪಿ ಕಚೇರಿಯಿಂದ ಹೊರಗೆ ಬೀಳುತ್ತಿದ್ದಂತೆ ತನ್ನನ್ನು ಮುತ್ತಿಕೊಂಡ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದರು.
2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದು,ಸದ್ಯ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಠಾಕೂರ್ ರವಿವಾರ ಮಧ್ಯಪ್ರದೇಶದ ಸೆಹೋರ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಂದರ್ಭ, ಶಾಸಕರು,ಕಾರ್ಪೊರೇಟರ್‌ಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸೇರಿಕೊಂಡು ಅಭಿವೃದ್ಧಿಗೆ ಶ್ರಮಿಸುವುದು ಸಂಸದರ ಕರ್ತವ್ಯವಾಗಿದೆ. ಒಳಚರಂಡಿಗಳನ್ನು,ನಿಮ್ಮ ಟಾಯ್ಲೆಟ್‌ಗಳನ್ನು ಸ್ವಚ್ಛಗೊಳಿಸುವುದು ತನ್ನ ಕೆಲಸವಲ್ಲ. ಸಂಸದೆಯಾಗಿ ತಾನು ಮಾಡಬೇಕಿರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದ್ದರು.







