ಉಡುಪಿ: ಜಲಾವೃತ ಮನೆಯಲ್ಲಿದ್ದ ಹಿರಿಯರ ರಕ್ಷಣೆಗೆ ಡಿಸಿ ಸ್ಪಂದನೆ

ಉಡುಪಿ, ಜು.23: ಗುಂಡಿಬೈಲು ಪರಿಸರದ ಜಲಾವೃತಗೊಂಡ ಮನೆ ಯೊಂದರಲ್ಲಿ ಆತಂಕಕ್ಕೆ ಒಳಗಾಗಿದ್ದ ಹಿರಿಯ ದಂಪತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲ ಪಾಟಿ, ಹಿರಿಯರ ಸಹಾಯಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಕಾಮತ್, ಗುಂಡಿಬೈಲು ಪರಿಸರ ಜಲಾವೃತಗೊಂಡಿರುವ ಮತ್ತು ಅಲ್ಲಿನ ಮನೆಯೊಂದ ರಲ್ಲಿರುವ ವಿಕ್ಟರ್ (82) ಹಾಗೂ ಹೆಲೆನ್(65) ದಂಪತಿಯ ರಕ್ಷಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಈ ಪೋ್ಟ್ ಜಿಲ್ಲಾಧಿಕಾರಿ ಯವರಿಗೂ ತಲುಪಿತ್ತು.
ಕೂಡಲೇ ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಈ ಕುರಿತು ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕಂದಾಯ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿ ಹಿರಿಯ ದಂಪತಿಗೆ ನೆರವಾಗಿದ್ದಾರೆ. ವಿಕ್ಟರ್ ಅವರ ಮನೆಗೆ ಹೋಗುವ ರಸ್ತೆ ಸಂಪೂರ್ಣ ನೀರಿನಿಂದ ತುಂಬಿ ಹೋಗಿದ್ದು, ಮನೆಯ ಕೂಡ ನೀರಿನಿಂದ ಆವೃತಗೊಂಡು ಹೊರಗಡೆ ಕಾಲಿಡದ ಸ್ಥಿತಿ ನಿರ್ಮಾಣವಾಗಿತ್ತು.
‘ನಾನು ಗುಂಡಿಬೈಲಿನಲ್ಲಿ ನೆರೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕುಟುಂಬಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದೆ. ಅದನ್ನು ಜಿಲ್ಲಾಧಿಕಾರಿಗಳಿಗೆ ಶಿಶಿರ್ ಶೆಟ್ಟಿ ಎಂಬವರು ಕಳುಹಿಸಿಕೊಟ್ಟಿದ್ದಾರೆ. ಕೂಡಲೇ ಸ್ಪಂದಿಸಿದ ಡಿಸಿ ಆ ಸ್ಥಳಕ್ಕೆ ಕಂದಾಯ ನಿರೀಕ್ಷಕರನ್ನು ಕಳುಹಿಸಿಕೊಟ್ಟಿದ್ದಾರೆ.
ಈ ಬಗ್ಗೆ ಕಂದಾಯ ನಿರೀಕ್ಷಕರು ನನಗೆ ಕರೆ ಮಾಡಿ ಮಾಹಿತಿ ನೀಡಿದರು’ ಎಂದು ಮಂಜುನಾಥ್ ಕಾಮ್ ತಿಳಿಸಿದರು.
