ಉರ್ದು ಪತ್ರಿಕೆಗಳು ನಡೆಸುವುದು ಅತ್ಯಂತ ಕಷ್ಟದಾಯಕ: ಉರ್ದು ಅಕಾಡೆಮಿ ಅಧ್ಯಕ್ಷ ಮುಬಿನ್ ಮುನಾವರ್

ಬೀದರ್, ಜು.24: ಇಂದಿನ ದಿನಗಳಲ್ಲಿ ಉರ್ದು ಪತ್ರಿಕೆಗಳನ್ನು ನಡೆಸುವುದು ಅತ್ಯಂತ ಕಷ್ಟದಾಯಕ ಕೆಲಸವಾಗಿದೆ. ಆದರೂ ಸತ್ಯ, ವಸ್ತುನಿಷ್ಠ ಹಾಗೂ ಜನರಿಗೆ ಅಗತ್ಯವಿರುವ ಸುದ್ದಿಗಳನ್ನು ಬಿತ್ತರಿಸಲು ಪ್ರಯತ್ನಿಸಬೇಕು ಎಂದು ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮುಬಿನ್ ಮುನಾವರ್ ಹೇಳಿದ್ದಾರೆ.
ನಗರದ ಶಾಹೀನ್ ಪದವಿಪೂರ್ವ ಕಾಲೇಜಿನ ಅಲ್ ಆಜೀಜ್ ಕಾನ್ಫರೆನ್ಸ್ ಹಾಲ್‌ನಲ್ಲಿ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಉರ್ದು ಪತ್ರಿಕೋದ್ಯಮ ಕುರಿತು ನಡೆದ ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೋದ್ಯಮದ ಜವಾಬ್ದಾರಿಗಳು ವಿಷಯದ ಕುರಿತ ವಿಭಾಗದ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರಾದವರು ಪತ್ರಿಕಾ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಿದೆ. ವೃತ್ತಿ ಜೀವನದಲ್ಲಿ ಕೇವಲ ನಕಾರಾತ್ಮಕ ವಿಷಯಗಳಿಗೆ ಆದ್ಯತೆ ನೀಡದೇ ಉತ್ತಮ ಕೆಲಸಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಕರ್ನಾಟಕ ಉರ್ದು ಅಕಾಡೆಮಿಯು ಉರ್ದು ಭಾಷೆಯ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ನಾವು ಅಧಿಕಾರಕ್ಕೆ ಬಂದ 11 ತಿಂಗಳಲ್ಲಿಯೇ ಸಾಕಷ್ಟು ಕೆಲಸ ಮಾಡಲಾಗಿದೆ ಎಂದರು.
ಬಿಬಿಸಿ ಉರ್ದು ನಿವೃತ್ತ ವರದಿಗಾರ ಮಕ್ಬುಲ್ ಅಹಮದ್ ಸಿರಾಜ್ ಮಾತನಾಡಿ, ಪತ್ರಿಕೆಗಳ ಏಳ್ಗೆಗಾಗಿ ಪತ್ರಕರ್ತರು ಪುರಾತನ ಸಂಪ್ರದಾಯಗಳನ್ನು ಬಿಟ್ಟು ಇಂದಿನ ಕಾಲಮಾನಕ್ಕೆ ಅನುಗುಣವಾಗಿ ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಉತ್ತಮ ತರಬೇತಿಯ ಅಗತ್ಯವಿದೆ ಎಂದು ನುಡಿದರು.
ಜ್ಞಾನಕ್ಕಿಂತ ಶಕ್ತಿಶಾಲಿ ಅಸ್ತ್ರ ಬೇರೊಂದಿಲ್ಲ. ಹೀಗಾಗಿ, ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೊಸತನ್ನು ತಿಳಿಯಲು ಯತ್ನಿಸಬೇಕು. ತಾವು ಮಾಡುವ ಸುದ್ದಿಗಳು ಸತ್ಯ ಮತ್ತು ನಿಷ್ಪಕ್ಷಪಾತತೆಯಿಂದ ಕೂಡಿರುವಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಜನರು ಅನಿವಾರ್ಯವಾಗಿ ಬೇರೆ ಪತ್ರಿಕೆಗಳ ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್, ಸುದ್ದಿ ನಿರೂಪಕ ಸೈಯ್ಯದ್ ಅಹಮದ್ ಗಿಲಾನಿ, ಸ್ಥಳೀಯ ಡೇಲಿ ಸಲಾರ್ ಪತ್ರಿಕೆಯ ಹಿರಿಯ ವರದಿಗಾರ ರಫಿ ಭಂಡಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ಹಲವರಿದ್ದರು.







