ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಶಾಶ್ವತ ಪರಿಹಾರ: ಸಚಿವ ನಿತಿನ್ ಗಡ್ಕರಿ ಭರವಸೆ

ಮಡಿಕೇರಿ, ಜು.24 : ಕೊಡಗನ್ನು ದಕ್ಷಿಣ ಕನ್ನಡ ವಿಭಾಗದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ, ಗುಡ್ಡ ಕುಸಿತ ಉಂಟಾದ ಭಾಗದಲ್ಲಿ ಈ ಬಾರಿಯೂ ಬಿರುಕು ಮೂಡಿರುವುದಲ್ಲದೆ ಗುಡ್ಡಗಳೂ ಕುಸಿಯುತ್ತಿವೆ. ರಸ್ತೆ ದುರಸ್ತಿ ಮತ್ತು ತಡೆಗೋಡೆ ನಿರ್ಮಿಸಬೇಕೆಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿಕೊಂಡ ಹಿನ್ನೆಲೆ ಅಗತ್ಯ ನಿಧಿ ಬಿಡುಗಡೆ ಮಾಡುವ ಭರವಸೆ ದೊರೆತಿದೆ ಎಂದು ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಹಾನಿಗೀಡಾದ ಮಡಿಕೇರಿ-ಸಂಪಾಜೆ ಭಾಗದ ರಾಷ್ಟ್ರೀಯ ಹೆದ್ದಾರಿ ಯಾವುದೇ ಶಾಶ್ವತ ಪರಿಹಾರ ಕಾಣದೆ ಈ ಬಾರಿಯ ಸಾಧಾರಣ ಮಳೆಗೂ ಹದಗೆಟ್ಟಿದೆ. ಅಲ್ಲದೆ ಗುಡ್ಡಗಳು ಕುಸಿಯುತ್ತಲೇ ಇವೆ. ಪರಿಹಾರ ಕಾಣದ ಈ ಸಮಸ್ಯೆಯ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆಯಲಾಗಿದ್ದು, ಸೂಕ್ತ ಸ್ಪಂದನೆ ದೊರೆತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಇದೇ ಜು.4 ರಂದು ಹೆದ್ದಾರಿಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿದ್ದನ್ನು ಸಿಮೆಂಟ್ ಸ್ಲರಿ ಹಾಕಿ ಮುಚ್ಚಲಾಗಿತ್ತು. ಆ ಸಂದರ್ಭ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಅಧೀಕ್ಷಕ ಎಂಜಿನಿಯರ್ ರಾಘವನ್ ಮತ್ತು ಕಾರ್ಯಪಾಲಕ ಎಂಜಿನಿಯರ್ ಎಸ್.ಹೊಳ್ಳ ಅವರು ಸ್ಥಳ ಪರಿಶೀಲನೆ ನಡೆಸಿದ್ದರು. ಶಾಶ್ವತ ಕಾಮಗಾರಿ ಕೈಗೊಳ್ಳಲು ಕೇಂದ್ರ ಭೂ ಸಾರಿಗೆ ಇಲಾಖೆಗೆ 47 ಕೋಟಿ ರೂ. ಅನುದಾನ ಬಿಡುಗಡೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಘವನ್ ಅವರು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.








