ಮಂಗಳೂರು: ಆದಾಯ ತೆರಿಗೆ ದಿನಾಚರಣೆ

ಮಂಗಳೂರು, ಜು.24: ಮಂಗಳೂರು ಆದಾಯ ತೆರಿಗೆ ಇಲಾಖೆ ವತಿಯಿಂದ ನಗರದ ಅತ್ತಾವರದ ಇಂಡಿಯನ್ ಮೆಡಿಕಲ್ ಹೌಸ್‌ನಲ್ಲಿ ಬುಧವಾರ ಆದಾಯ ತೆರಿಗೆ ದಿನಾಚರಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಾಯ ತೆರಿಗೆ ಇಲಾಖೆ ಮಂಗಳೂರು ವಿಭಾಗದ ಪ್ರಧಾನ ಆಯುಕ್ತ ನರೋತ್ತಮ್ ಮಿಶ್ರಾ ಆದಾಯ ತೆರಿಗೆ ಪಾವತಿದಾರರಿಗೆ ಇರುವ ಅನುಮಾನ, ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಂಗಳೂರು ಕಚೇರಿಯಲ್ಲಿ ಉಚಿತ ಕಾನೂನು ಸಲಹಾ ಘಟಕ ಆರಂಭಿಸಲಾಗಿದೆ. ಪಾವತಿದಾರರು ಇದರ ಉಪಯೋಗ ಪಡೆಯಬಹುದು. ಸರಿಯಾದ ಆದಾಯ ತೆರಿಗೆ ಪಾವತಿಯಿಂದ ದೇಶ ಬಲಿಷ್ಠವಾಗಲು ಸಾಧ್ಯ ಎಂದರು.
2300 ವರ್ಷಗಳ ಹಿಂದಿನ ಕೌಟಿಲ್ಯನ ಅರ್ಥಶಾಸ್ತ್ರ, ಮನುಸ್ಮತಿಯಲ್ಲೂ ಆದಾಯ ತೆರಿಗೆ ಕುರಿತ ಇಲ್ಲೇಖವಿದೆ.ಸ್ವಾತಂತ್ರಪೂರ್ವದ 1860ರ ಜು.24ರಂದು ದೇಶದಲ್ಲಿ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂದಿದ್ದು, ಇಂದಿಗೆ 159 ವರ್ಷವಾಗಿದೆ. ಮೊದಲ ವರ್ಷ 11 ಲಕ್ಷ ರೂ. ಸಂಗ್ರಹ ವಾಗಿದ್ದ ಆದಾಯವು ಕಳೆದ ವರ್ಷ 11ಲಕ್ಷ 38 ಸಾವಿರ ಕೋಟಿ ರೂ. ಸಂಗ್ರಹವಾಗಿದೆ. ಮಂಗಳೂರು ವಿಭಾಗದಲ್ಲಿ ಸುಮಾರು 3 ಲಕ್ಷ ಮಂದಿ ಆದಾಯ ತೆರಿಗೆ ಪಾವತಿದಾರರಿದ್ದಾರೆ. ತೆರಿಗೆ ತಪ್ಪಿಸುವುದು ಅಪರಾಧವಾಗಿದ್ದು, ಪಾವತಿದಾರರ ಸಂಖ್ಯೆ ಹೆಚ್ಚಾಗುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ನರೋತ್ತಮ್ ಮಿಶ್ರಾ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ, ಅಸೂಯೆ ಬಿಟ್ಟು ಇತರರೊಂದಿಗೆ ಪ್ರೀತಿಯಿಂದ ವರ್ತಿಸಿದರೆ ಉತ್ತಮ ದೇಹಾರೋಗ್ಯ ಪಡೆಯಬಹುದು. ಸೇವಿಸುವ ಆಹಾರವೇ ಉತ್ತಮ ಔಷಧವಾಗಿದೆ ಎಂದರಲ್ಲದೆ, ಮಂಗಳೂರು ಆದಾಯ ತೆರಿಗೆ ಇಲಾಖೆ ಉತ್ತಮ ಕೆಲಸ ಮಾಡುತ್ತಿದ್ದು, ಆ ಹೆಸರವನ್ನು ಉಳಿಸಿ ಇನ್ನಷ್ಟು ಉತ್ತಮ ಸೇವೆ ನೀಡಬೇಕು ಎಂದು ಕರೆ ನೀಡಿದರು.
ಮಂಗಳೂರು ಆದಾಯ ತೆರಿಗೆ ಆಯುಕ್ತ ಡಾ.ಎಸ್. ಶಾಕಿರ್ ಹುಸೈನ್, ಹೆಚ್ಚುವರಿ ಆಯುಕ್ತ ಕೆ.ಎ.ಚಂದ್ರ ಕುಮಾರ್, ಜಂಟಿ ಆಯುಕ್ತ ಸೌರಭ್ ದುಬೆ ಉಪಸ್ಥಿತರಿದ್ದರು. ಹೆಚ್ಚುವರಿ ಆಯುಕ್ತ ಎಸ್. ನಂಬಿರಾಜನ್ ಸ್ವಾಗತಿಸಿದರು. ನತಾಲಿಯಾ ಹೆಲೆನ್ ಲೋಬೋ ಕಾರ್ಯಕ್ರಮ ನಿರೂಪಿಸಿದರು.










