ಜು. 26ರಂದು ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿ: ಸಾರ್ವಜನಿಕರಿಗೆ ಪ್ರವೇಶ ನಿಷೇಧ

ಉಡುಪಿ, ಜು. 24: ಶ್ರೀಲಂಕಾದ ಪ್ರಧಾನಿ ರನಿಲಾ ವಿಕ್ರಮಶಿಂಘೆ ಅವರು ಜು.26ರಂದು ಬೈಂದೂರು ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ನವಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನದ ಭೇಟಿಯನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಶುಕ್ರವಾರ ಬೆಳಗ್ಗೆ 9ಗಂಟೆಯವರೆಗೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವಿದ್ದು, ಅನಂತರ ಶ್ರೀಲಂಕಾ ಪ್ರಧಾನಿ ಅವರ ನವಚಂಡಿಯಾಗದ ಪೂರ್ಣಾಹುತಿ ಮುಗಿದು ಅವರು ನಿರ್ಗಮಿಸುವವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ ಎಂದು ತಿಳಿದುಬಂದಿದೆ. ಅಲ್ಲದೇ ದೇವಸ್ಥಾನದ ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟು ಹಾಗೂ ವಸತಿಗೃಹಗಳನ್ನು ಮುಚ್ಚಲು ಸಹ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
Next Story





