ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ಜು. 24: ಸೊಳ್ಳೆಗಳ ಉತ್ಪತ್ತಿ ಸ್ಥಾನಗಳನ್ನು ಗುರುತಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಮಲೇರಿಯಾ ಹರಡುವುದನ್ನು ನಿಯಂತ್ರಿಸಿ ಎಂದು ಆರೋಗ್ಯ ಇಲಾಖೆ ಮತ್ತು ನಗರಸಭೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಬುಧವಾರ ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ, ಆಸುಪಾಸಿನ ಸ್ಥಳಗಳಲ್ಲಿ ಸಂಚರಿಸಿ ಅವುಗಳನ್ನು ಪರಿಶೀಲಿಸಿದ ಬಳಿಕ ಅವರು ಈ ಸೂಚನೆ ನೀಡಿದರು.
ಮಲ್ಪೆ ಬಂದರಿನಲ್ಲಿ ಲಂಗರು ಹಾಕಿರುವ ಬೋಟುಗಳಲ್ಲಿರುವ ಸಿಂಟೆಕ್ಸ್ ಟ್ಯಾಂಕ್‌ಗಳಲ್ಲಿ ಶೇಖರಣೆಗೊಂಡಿರುವ ನೀರಿನಲ್ಲಿ, ಬೋಟ್‌ನಲ್ಲಿರುವ ಇತರೆ ದಿನಬಳಕೆಯ ವಸ್ತುಗಳಲ್ಲಿ ಮತ್ತು ಬೋಟ್‌ನಲ್ಲಿರುವ ಟೈರ್‌ಗಳಲ್ಲಿ ಶೇಖರಣೆ ಗೊಂಡಿರುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ, ಮಲೇರಿಯಾ ಹರಡುವ ಸಾಧ್ಯತೆಗಳಿವೆ ಎಂದವರು ನುಡಿದರು.
ಮಲ್ಪೆಪ್ರದೇಶದಲ್ಲಿ ಮಲೇರಿಯ ತಡೆ ಕುರಿತಂತೆ ಪಾಗಿಂಗ್ ನಡೆಸುವಂತೆ ಮತ್ತು ನೀರಿಗೆ ಕೆಮಿಕಲ್ ಸ್ಪ್ರೈ ಮಾಡುವ ಮೂಲಕ ಮಲೇರಿಯಾ ಹರಡುವ ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಿಸುವ ಕುರಿತಂತೆ ಆರೋಗ್ಯ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ ಹೆಪ್ಸಿಬಾ ರಾಣಿ, ನಾಗರಿಕರು ಮಲೇರಿಯಾ ಜ್ವರದಿಂದ ಬಳಲುತ್ತಿದ್ದಲ್ಲಿ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ, ಪರೀಕ್ಷಿಸಿಕೊಂಡು, ಅಗತ್ಯ ಚಿಕಿತ್ಸೆ ಪಡೆಯುವಂತೆ ಹಾಗೂ ವೈದ್ಯರಿಗೆ ಅಗತ್ಯ ಮಾಹಿತಿ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಮಲೇರಿಯಾಧಿಕಾರಿ ಡಾ.ಪ್ರಶಾಂತ್ ಭಟ್, ಕೀಟಶಾಸ್ತ್ರಜ್ಞೆ ಮುಕ್ತಾ, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಹಾಗೂ ಸ್ಥಳೀಯ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.









