ತಲೆಮರೆಸಿಕೊಂಡಿದ್ದ ಪೊಕ್ಸೊ ಆರೋಪಿ ಸೆರೆ

ಮಂಗಳೂರು, ಜು.24: ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೊಕ್ಸೊ ಪ್ರಕರಣದ ಆರೋಪಿಯನ್ನು ಕುಂಜತ್‌ಬೈಲ್‌ನಲ್ಲಿ ಬಜ್ಪೆ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿದ್ದಸಮುದ್ರ ನಿವಾಸಿ ಸೋಮಲಿಂಗಪ್ಪ ಯಾನೆ ಸೋಮಶೇಖರ(45) ಬಂಧಿತ ಆರೋಪಿ.
ಪ್ರಕರಣ ವಿವರ: 2014ರಲ್ಲಿ ಬಾಲಕಿಯ ಅತ್ಯಾಚಾರಗೈದ ಆರೋಪದಲ್ಲಿ ಸೋಮಲಿಂಗಪ್ಪ ವಿರುದ್ಧ ಬಜ್ಪೆ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಆರೋಪಿಯು ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು.
ಆರೋಪಿಯ ಪತ್ತೆ ಕಾರ್ಯ ಮುಂದುವರಿಸಿದ ಬಜ್ಪೆ ಪೊಲೀಸರು, ಮಂಗಳೂರು ಸಮೀಪದ ಕುಂಜತ್‌ಬೈಲ್ ಎಂಬಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಜ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕ ಸತೀಶ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ರಾಮ ನಾಯ್ಕ, ಕಾನ್‌ಸ್ಟೇಬಲ್‌ಗಳಾದ ತಿರುಪತಿ, ಚಂದ್ರಮೋಹನ್ ಭಾಗವಹಿಸಿದ್ದರು.





