ಭಯೋತ್ಪಾದನೆ ನಿಗ್ರಹ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಹೊಸದಿಲ್ಲಿ,ಜು.24: ಭಯೋತ್ಪಾದನೆ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಜರುಗಿಸಲು ಅವಕಾಶ ಕಲ್ಪಿಸಿರುವ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ(ತಿದ್ದುಪಡಿ) ಮಸೂದೆಯನ್ನು ಲೋಕಸಭೆಯು ಬುಧವಾರ ಧ್ವನಿಮತದಿಂದ ಅಂಗೀಕರಿಸಿತು. ತಿದ್ದುಪಡಿಗಳನ್ನು ಸಮರ್ಥಿಸಿಕೊಂಡ ಗೃಹಸಚಿವ ಅಮಿತ್ ಶಾ ಅವರು,ಕಾನೂನು ಜಾರಿ ಸಂಸ್ಥೆಗಳು ಭಯೋತ್ಪಾದಕರಿಗಿಂತ ಒಂದು ಹೆಜ್ಜೆ ಮುಂದಿರುವಂತೆ ಮಾಡಲು ಈ ತಿದ್ದುಪಡಿಗಳು ಅಗತ್ಯವಾಗಿವೆ ಎಂದು ಹೇಳಿದರು.
ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಅವರು ಭಯೋತ್ಪಾದನೆ ನಿಗ್ರಹ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಮತ್ತು ಭೀತಿವಾದವನ್ನು ದಮನಿಸಲಷ್ಟೇ ಅದನ್ನು ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಶಂಕಿತ ವ್ಯಕ್ತಿಯನ್ನ್ನೂ ಭಯೋತ್ಪಾದಕನೆಂದು ಘೋಷಿಸುವ ಮಸೂದೆಯಲ್ಲಿನ ನಿಬಂಧನೆಯು ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಅಗತ್ಯವಾಗಿದೆ ಎಂದು ಅವರು ಹೇಳಿದರು.
ತಿದ್ದುಪಡಿಯನ್ನು ವಿರೋಧಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆತ್ತಿಕೊಂಡ ಶಾ,ಯುಪಿಎ ತನ್ನ ಅಧಿಕಾರಾವಧಿಯಲ್ಲಿ ಭಯೋತ್ಪಾದನೆ ನಿಗ್ರಹ ಕಾನೂನುಗಳಿಗೆ ತಿದ್ದುಪಡಿಗಳನ್ನು ತಂದಿದ್ದು ಸರಿಯಾದ ಕ್ರಮವಾಗಿದ್ದರೆ ಎನ್‌ಡಿಎ ವಿಷಯದಲ್ಲಿಯೂ ಅದು ಅನ್ವಯವಾಗುತ್ತದೆ ಎಂದರು.
ಕೆಲವು ವ್ಯಕ್ತಿಗಳು ಸಿದ್ಧಾಂತದ ಹೆಸರಿನಲ್ಲಿ ನಗರ ನಕ್ಸಲ್ ವಾದವನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಅಂತಹವರ ಬಗ್ಗೆ ಸರಕಾರಕ್ಕೆ ಯಾವುದೇ ಸಹಾನುಭೂತಿಯಿಲ್ಲ ಎಂದು ಹೇಳಿದರು. ಹಿಂದಿನ ಸರಕಾರಗಳು ಭಯೋತ್ಪಾದನೆ ನಿಗ್ರಹ ಕಾನೂನುಗಳಿಗೆ ತಿದ್ದುಪಡಿಗಳನ್ನು ತಂದಿದ್ದನ್ನು ಪ್ರಸ್ತಾಪಿಸಿದ ಅವರು,ಸರಕಾರವು ಭೀತಿವಾದದ ವಿರುದ್ಧ ಹೋರಾಡುತ್ತದೆ ಮತ್ತು ಯಾವ ಪಕ್ಷವು ಅಧಿಕಾರದಲ್ಲಿದೆ ಎನ್ನುವುದು ಮುಖ್ಯವಾಗಬಾರದು ಎಂದರು.
ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ ಅವರ ಬೇಡಿಕೆಯಂತೆ ಮಸೂದೆಯ ಮೇಲೆ ಮತಗಳ ವಿಭಜನೆ ಸಂದರ್ಭ 287 ಸಂಸದರು ಅದನ್ನು ಬೆಂಬಲಿಸಿದರೆ ಕೇವಲ ಎಂಟು ಸಂಸದರಿಂದ ವಿರೋಧ ವ್ಯಕ್ತವಾಗಿತ್ತು. ಕೆಲವು ಪ್ರತಿಪಕ್ಷ ಸದಸ್ಯರು ಮಸೂದೆಗೆ ತಂದಿದ್ದ ತಿದ್ದುಪಡಿಗಳೂ ಮತ ವಿಭಜನೆಯಲ್ಲಿ ಪರಾಭವಗೊಂಡವು.
ಎಡಪಂಥೀಯ ಹಿಂಸಾಚಾರವನ್ನು ಆರಂಭದಲ್ಲಿ ಸೈದ್ಧಾಂತಿಕವೆಂದು ಪರಿಗಣಿಸಲಾಗಿತ್ತು ಮತ್ತು ಇತರರನ್ನು ಕೊಲ್ಲಲು ಅಮಾಯಕರನ್ನು ತಪ್ಪುದಾರಿಗೆ ಎಳೆಯಲಾಗಿತ್ತು ಎಂದ ಶಾ,ಭೀತಿವಾದ ದಮನ ಈ ಕಾನೂನಿನ ಉದ್ದೇಶವಾಗಿದೆ ಮತ್ತು ಅದು ದುರ್ಬಳಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಮೂಲಭೂತವಾದಿ ಬೋಧಕರು ದ್ವೇಷ ಮತ್ತು ಭೀತಿವಾದದ ಸಿದ್ಧಾಂತವನ್ನು ಹರಡುತ್ತಿದ್ದಾರೆ ಎಂದ ಶಾ,ಭೀತಿವಾದವು ವ್ಯಕ್ತಿಯ ಮನೋಸ್ಥಿತಿಯಿಂದ ಸೃಷ್ಟಿಯಾಗಿದೆ ಮತ್ತು ಅದು ಸಾಂಸ್ಥಿಕವಲ್ಲ ಎಂದ ಅವರು,ಭೀತಿವಾದವನ್ನು ದಮನಿಸುವುದು ಸರಕಾರದ ಆದ್ಯತೆಯಾಗಿದೆ ಎಂದರು.
ಕಾಯ್ದೆಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ್ದ ಕಾಂಗ್ರೆಸ್ ಸದಸ್ಯರಿಗೆ ತಿರುಗೇಟು ನೀಡಿದ ಶಾ,ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯನ್ನು ತಂದಿತ್ತು ಎಂದು ನೆನಪಿಸಿದರು.
ಈ ತಿದ್ದುಪಡಿಯನ್ನು ತರುವ ಮೂಲಕ ನಾವು ಒಕ್ಕೂಟ ಸ್ವರೂಪವನ್ನು ನಾಶಗೊಳಿಸಿದ್ದೇವೆ ಎಂದು ಕೆಲವು ಪ್ರತಿಪಕ್ಷ ಸದಸ್ಯರು ಹೇಳಿದ್ದಾರೆ. ಹಾಗಿದ್ದರೆ ಯುಪಿಎ ಸರಕಾರವು ಕಾಯ್ದೆಗೆ ತಿದ್ದುಪಡಿ ತಂದಾಗಲೇ ಒಕ್ಕೂಟ ಸ್ವರೂಪ ನಾಶಗೊಂಡಿತ್ತು ಎಂದರು.







