ಮಡಿಕೇರಿ: ಸರಣಿ ರಸ್ತೆ ಅಪಘಾತ- ನಾಲ್ವರಿಗೆ ಗಂಭೀರ ಗಾಯ

ಮಡಿಕೇರಿ, ಜು.24: ಲಾರಿ, ಬಸ್ ಮತ್ತು ಸ್ಕಾರ್ಫಿಯೋ ವಾಹನಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 275ರ ಸ್ಯಾಂಡಲ್‍ಕಾಡು ಬಳಿ ಬುಧವಾರ ನಡೆದಿದೆ.
ಲಾರಿಯನ್ನು ಓವರ್‍ಟೇಕ್ ಮಾಡಲು ಯತ್ನಿಸಿದ ಕೆಎಸ್‍ಆರ್‍ಟಿಸಿ ಬಸ್ ಸ್ಕಾರ್ಫಿಯೋಗೆ ಢಿಕ್ಕಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಕಾರ್ಫಿಯೋ ವಾಹನದಲ್ಲಿದ್ದ ಮಂಗಳೂರು ಮೂಲದ ನಾಲ್ವರು ಪ್ರವಾಸಿ ಯುವಕರು ಗಾಯಗೊಂಡಿದ್ದಾರೆ.
ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಸ್ಕಾರ್ಫಿಯೋ ವಾಹನ ತೆರಳುತ್ತಿತ್ತು. ಈ ವೇಳೆ ಸ್ಯಾಂಡಲ್‍ಕಾಡು ಬಳಿ ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಲಾರಿಯೊಂದನ್ನು ಅದೇ ಕಡೆಯಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಓವರ್‍ಟೇಕ್ ಮಾಡಲು ಮುಂದಾಗಿ ಸ್ಕಾರ್ಫಿಯೋ ವಾಹನಕ್ಕೆ ಢಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಗಾಯಗೊಂಡ ಯುವಕರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೂರು ವಾಹನಗಳ ನಡುವೆ ಢಿಕ್ಕಿಯಾದ ಪರಿಣಾಮ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಬಂದ್ ಆಗಿತ್ತು.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.









