ಐಎಂಎ ಬಹುಕೋಟಿ ಹಗರಣ: ಎಸ್‌ಐಟಿ ತನಿಖೆಯ ಪ್ರಗತಿ ವರದಿ ನೀಡಲು ಸರಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು, ಜು.24: ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಇಲ್ಲಿಯವರೆಗೆ ನಡೆಸಿರುವ ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಜು.30ರೊಳಗೆ ಸಲ್ಲಿಸಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಈ ಕುರಿತು ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾಗಿರುವ ಮೂರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಐಎಂಎ ಕಂಪೆನಿಯ ಆಸ್ತಿ ಜಪ್ತಿ ಕ್ರಮ ಕೈಗೊಳ್ಳಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಬೆಂಗಳೂರು ವಲಯದ ಪ್ರಾದೇಶಿಕ ಆಯುಕ್ತ ಅವರನ್ನು ಸಕ್ಷಮ ಪ್ರಾಧಿಕಾರವಾಗಿ ನೇಮಕ ಮಾಡಲಾಗಿದೆ ಎಂದು ಸರಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಯಾವ ಅರ್ಹತೆಗಳ ಆಧಾರದ ಮೇಲೆ ಪ್ರಾದೇಶಿಕ ಆಯುಕ್ತರನ್ನು ನೇಮಕ ಮಾಡಿದ್ದೀರಿ. ನಾಲ್ಕು ತಿಂಗಳುಗಳಿಂದ ಏಕೆ ಸಕ್ಷಮ ಪ್ರಾಧಿಕಾರವನ್ನು ರಚನೆ ಮಾಡಿಲ್ಲ ಎಂದು ಪ್ರಶ್ನಿಸಿತು.
ಐಎಂಎ ಪ್ರಕರಣದಲ್ಲಿ ಬೆಂಗಳೂರು ನಗರದ ಜಿಲ್ಲಾಧಿಕಾರಿ ಅವರನ್ನು ಸಕ್ಷಮ ಪ್ರಾಧಿಕಾರವನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಅವರ ಹೆಸರೆ ಐಎಂಎ ಪ್ರಕರಣದಲ್ಲಿ ಕೇಳಿ ಬಂತು. ಹೀಗಾಗಿ, ಹೊಸದಾಗಿ ಸಕ್ಷಮ ಪ್ರಾಧಿಕಾರವಾಗಿ ಯಾರನ್ನೂ ನೇಮಕ ಮಾಡಿರಲಿಲ್ಲ. ಈಗ ನೇಮಕವಾಗಿರುವ ಪ್ರಾದೇಶಿಕ ಆಯುಕ್ತರು ಭ್ರಷ್ಟಾಚಾರ ರಹಿತರು, ಇವರ ವಿರುದ್ಧ ಯಾವುದೇ ಆರೋಪಗಳೂ ಇಲ್ಲ ಎಂದು ಪೀಠಕ್ಕೆ ತಿಳಿಸಿದರು.
ಐಎಂಎ ಹಗರಣವನ್ನು ಏಕೆ ಸಿಬಿಐ ತನಿಖೆಗೆ ಆದೇಶಿಸಬಾರದು ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠವು ಇದೊಂದು ದೊಡ್ಡ ಹಗರಣವಾಗಿದೆ. ಹೀಗಾಗಿ, ಬೆಂಗಳೂರು ನಗರಕ್ಕೆ ಜಿಲ್ಲಾಧಿಕಾರಿಯ ನೇಮಕವಾಗಲಿ. ಅಲ್ಲದೆ, ಐಎಂಎಗೆ ಬಂಡವಾಳ ಹೂಡಿರುವ ಗ್ರಾಹಕರಿಗೆ ಭದ್ರತೆ ಒದಗಿಸಬೇಕೆಂದು ನ್ಯಾಯಪೀಠವು ತಿಳಿಸಿತು. ಐಎಂಎಗೆ ಹಣ ಹೂಡಿಕೆ ಮಾಡಿರುವ ಗ್ರಾಹಕರ ಹಣವನ್ನು ಆಡಿಟ್ ಮಾಡಬೇಕೆಂದು ಆದೇಶಿಸಿತು. ಅಲ್ಲದೆ, ಐಎಂಎಗೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸಿರುವ ತನಿಖೆಯ ಪ್ರಗತಿ ವರದಿಯನ್ನು ಜು.30ರೊಳಗೆ ಸಲ್ಲಿಸಲು ಆದೇಶಿಸಿತು. ಅರ್ಜಿದಾರರ ಪರವಾಗಿ ವಕೀಲರಾದ ಮುಹಮ್ಮದ್ ತಾಹೀರ್, ಆರ್.ಕೋತ್ವಾಲ್, ಜಿ.ಆರ್.ಮೋಹನ್ ವಾದಿಸಿದರು.







