ನಾನು 13 ವರ್ಷದವನಾಗಿದ್ದಾಗ ಲೈಂಗಿಕ ಶೋಷಣೆಗೊಳಗಾಗಿದ್ದೆ: ಸಂಸತ್ತಿನಲ್ಲಿ ಡೆರೆಕ್ ಒ’ಬ್ರಿಯಾನ್

ಹೊಸದಿಲ್ಲಿ,ಜು.24: ತಾನು 13 ವರ್ಷದ ಬಾಲಕನಾಗಿದ್ದಾಗ ಲೈಂಗಿಕ ಶೋಷಣೆಗೊಳಗಾಗಿದ್ದೆ ಎಂಬ ಮಾಹಿತಿಯನ್ನು ಬುಧವಾರ ರಾಜ್ಯಸಭೆಯಲ್ಲಿ ಹಂಚಿಕೊಂಡ ತೃಣಮೂಲ ನಾಯಕ ಡೆರೆಕ್ ಒ’ಬ್ರಿಯಾನ್ ಅವರು,ಇಂತಹ ಅನುಭವಗಳನ್ನು ಮುಚ್ಚಿಟ್ಟುಕೊಳ್ಳುವ ಬದಲು ಅವುಗಳ ಕುರಿತು ಮಾತನಾಡುವಂತೆ ಜನರನ್ನು ಆಗ್ರಹಿಸಿದರು. ತನ್ನ ಭಯಾನಕ ಅನುಭವದ ಬಗ್ಗೆ ಮಾತನಾಡಿದ ಅವರ ಧೈರ್ಯವನ್ನು ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವಾರು ಸದಸ್ಯರು ಪ್ರಶಂಸಿಸಿದರು.
ಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳ ಕುರಿತು ಕಾನೂನಿನ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಒ’ಬ್ರಿಯಾನ್,ಮಕ್ಕಳ ಮೇಲಿನ ತೀವ್ರ ಲೈಂಗಿಕ ಹಲ್ಲೆಗಾಗಿ ಮರಣ ದಂಡನೆಯನ್ನು ಸೇರಿಸಲು ಪೊಕ್ಸೊ ಕಾಯ್ದೆಗೆ ಉದ್ದೇಶಿತ ತಿದ್ದುಪಡಿಗಳನ್ನು ಬೆಂಬಲಿಸಿದರು.
ಲೈಂಗಿಕ ಶೋಷಣೆ ಮನೆಯಲ್ಲಿಯೇ ಆರಂಭಗೊಳ್ಳುತ್ತದೆ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ. ಜನರು,ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವವರು ಈ ಕುರಿತು ಮಾತನಾಡುವ ಮತ್ತು ಸಂವಾದವನ್ನು ಆರಂಭಿಸುವ ಅಗತ್ಯವಿದೆ. ಇಂತಹ ಶೋಷಣೆಗಳ ಕುರಿತು ಸಾರ್ವಜನಿಕ ಜೀವನದಲ್ಲಿಯ ಹೆಚ್ಚೆಚ್ಚು ಜನರು ಮಾತನಾಡತೊಡಗಿದರೆ ಮಕ್ಕಳಿಗೂ ಇಂತಹ ವಿಷಯಗಳ ಬಗ್ಗೆ ಮಾತನಾಡುವುದು ಸುಲಭವಾಗುತ್ತದೆ ಎಂದು ಹೇಳಿದ ಒ’ಬ್ರಿಯಾನ್,ಇದೇ ಕಾರಣಕ್ಕಾಗಿ ಬಹಳಷ್ಟು ಹೆಮ್ಮೆ,ಜೊತೆಗೆ ದುಃಖ ಮತ್ತು ನೋವಿನಿಂದ ತನ್ನ ಅನುಭವವನ್ನು ಬಿಚ್ಚಿಡುತ್ತಿದ್ದೇನೆ. ತನ್ನ 13 ವರ್ಷ ಪ್ರಾಯದಲ್ಲಿ ಚಡ್ಡಿ ಮತ್ತು ಟಿ-ಶರ್ಟ್ ಧರಿಸಿದ್ದ ತಾನು ಟೆನ್ನಿಸ್ ಪ್ರಾಕ್ಟೀಸ್‌ನಿಂದ ಮನೆಗೆ ಮರಳಲು ಕಿಕ್ಕಿರಿದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಲೈಂಗಿಕ ಶೋಷಣೆಗೊಳಗಾಗಿದ್ದೆ ಎಂದರು.







