ಕೇರಳದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ: ಭಾರತದ ಹವಾಮಾನ ಇಲಾಖೆ ಮುನ್ಸೂಚನೆ

ಹೊಸದಿಲ್ಲಿ, ಜು. 24: ಕೇರಳದಲ್ಲಿ ಜುಲೈ 26ರ ವರೆಗೆ ಭಾರೀ ಮಳೆ ಸುರಿಯಲಿದೆ ಎಂದು ಭಾರತದ ಹವಾಮಾನ ಇಲಾಖೆ ಬುಧವಾರ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಣ್ಣೂರು ಹಾಗೂ ಕಾಸರಗೋಡು ವಲಯಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಹೊರತಾಗಿಯೂ ರಾಜ್ಯದಲ್ಲಿ ಜೂನ್ 1ರಿಂದ ಜುಲೈ 22ರ ವರೆಗೆ ಶೇ. 29 ಮಳೆ ಕೊರತೆಯಾಗಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.
ರಾಜ್ಯಕ್ಕೆ ಮುಂಗಾರು ಮಳೆ ವಿಳಂಬವಾಗಿ ಆಗಮಿಸಿರುವುದು ಹಾಗೂ ಅನಂತರ ಕಡಿಮೆ ಮಳೆ ಸುರಿದಿರುವುದು ಮಳೆ ಕೊರತೆಗೆ ಕಾರಣ. ಇದರಿಂದಾಗಿ ಜೂನ್ ಅತ್ಯಧಿಕ ಭಾಗ ಹಾಗೂ ಜುಲೈ ಮೊದಲ ಅರ್ಧ ಭಾಗ ಮಳೆ ಆಧರಿತ ಚಟುವಟಿಕೆಗಳು ರದ್ದುಗೊಂಡಿತ್ತು ಎಂದು ಸ್ಕೈಮೆಟ್ ತಿಳಿಸಿದೆ.
ಜೂನ್ 1ರಿಂದ ಜುಲೈ 22ರ ನಡುವೆ ಸರಾಸರಿ 1166.5 ಎಂಎಂ ಮಳೆಗೆ ಪ್ರತಿಯಾಗಿ ಈ ವರ್ಷ ಕೇರಳದಲ್ಲಿ 831.2 ಎಂಎಂ ಮಳೆ ಸುರಿದಿರುವುದು ದಾಖಲಾಗಿದೆ. ಕೇರಳದ ಹಲವು ಭಾಗಗಳಲ್ಲಿ ಮುಖ್ಯವಾಗಿ ಉತ್ತರ ವಲಯದಲ್ಲಿ ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದೆ. ಕಣ್ಣೂರಿನಲ್ಲಿ 111.6 ಎಂ.ಎಂ., ಕೋಝಿಕ್ಕೋಡ್‌ನಲ್ಲಿ 44 ಎಂ.ಎಂ., ಪುನಲೂರಿನಲ್ಲಿ 48 ಎಂ.ಎಂ., ಕರಿಪುರ ವಿಮಾನ ನಿಲ್ದಾಣದಲ್ಲಿ 52 ಎಂ.ಎಂ. ಹಾಗೂ ಕೊಚ್ಚಿಯಲ್ಲಿ 18 ಎಂ.ಎಂ. ಮಳೆದ ಸುರಿದಿರುವುದು ದಾಖಲಾಗಿದೆ. ಹೆಚ್ಚುತ್ತಿರುವ ನೀರನ್ನು ನಿಯಂತ್ರಿಸಲು ಜೂನ್ 19ರಂದು ಇಡುಕ್ಕಿಯ ಮಲಂಕರ ಅಣೆಕಟ್ಟಿನ 2 ಬಾಗಿಲು, ಎರ್ನಾಕುಳಂ ಜಿಲ್ಲೆಯ ಭಲ್ಲತಾತೆನ್‌ಕೆಟ್ಟು ಅಣೆಕಟ್ಟಿನ 9 ಬಾಗಿಲು, ಕಲ್ಲರಕುಟ್ಟಿ ಹಾಗೂ ಪಂಬಾ ಅಣೆಕಟ್ಟುಗಳ ತಲಾ ಒಂದು ಬಾಗಿಲನ್ನು ತೆರೆಯಲಾಗಿದೆ.
ಕೇರಳ ಸರಕಾರ ರಾಜ್ಯದಾದ್ಯಂತ ಹಲವು ಪರಿಹಾರ ಕೇಂದ್ರಗಳನ್ನು ಆರಂಭಿಸಿದೆ. ಈ ನಡುವೆ ಕರ್ನಾಟಕದಲ್ಲಿ ಮೂರನೆ ದಿನವಾದ ಬುಧವಾರ ಕೂಡ ಭಾರೀ ಮಳೆ ಸುರಿದಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕರ್ನಾಟಕದ ಉಡುಪಿ, ಕೊಡಗು ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಈ ಎರಡು ಜಿಲ್ಲೆಗಳಲ್ಲಿ ಭಾರತ ಹವಾಮಾನ ಇಲಾಖೆ ಬುಧವಾರ ರೆಡ್ ಅಲರ್ಟ್ ಘೋಷಿಸಿದೆ.







