ಕರ್ನಾಟಕದ ಶಾಸಕರ ಮನವಿ: ನ್ಯಾಯವಾದಿಗಳ ಸಮ್ಮುಖದಲ್ಲಿ ಸೂಕ್ತ ಆದೇಶ; ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜು. 24: ವಿಶ್ವಾಸ ಮತಕ್ಕೆ ಸಂಬಂಧಿಸಿ ಕರ್ನಾಟಕದ ಇಬ್ಬರು ಶಾಸಕರು ಸಲ್ಲಿಸಿದ ಮನವಿಯ ಕುರಿತು ನ್ಯಾಯವಾದಿಗಳಾದ ಮುಕುಲ್ ರೋಹ್ಟಗಿ (ಬಂಡಾಯ ಶಾಸಕರ ಪರ ವಕೀಲ) ಹಾಗೂ ಅಭಿಷೇಕ್ ಸಿಂಘ್ವಿ (ಕಾಂಗ್ರೆಸ್ ಪರ ವಕೀಲ) ಅವರ ಉಪಸ್ಥಿತಿಯಲ್ಲಿ ಸೂಕ್ತ ಆದೇಶ ನೀಡಲಾಗುವುದು ಹಾಗೂ ವಿಲೇವಾರಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ನ್ಯಾಯಾಲಯದಲ್ಲಿ ಇಬ್ಬರು ನ್ಯಾಯವಾದಿಗಳ ಅನುಪಸ್ಥಿತಿಯ ಬಗ್ಗೆ ತಿಳಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ‘‘ಮುಕುಲ್ ರೋಹ್ಟಗಿ ಎಲ್ಲಿ? ಅಭಿಷೇಕ್ ಮನು ಸಿಂಘ್ವಿ ಎಲ್ಲಿ?” ಎಂದು ಮುಖ್ಯ ನ್ಯಾಯಮೂರ್ತಿಗಳು ಕೇಳಿದರು. ಆಗ ರೋಹ್ಟಗಿ ಅವರ ಕಿರಿಯ, ಅವರು ದಿಲ್ಲಿಯಲ್ಲಿ ಇಲ್ಲ ಎಂದು ತಿಳಿಸಿದರು. ಅನಂತರ ಅವರು ವಿಚಾರಣೆಯನ್ನು ನಾಳೆಗೆ ಮುಂದೂಡುವಂತೆ ಮನವಿ ಮಾಡಿದರು.’’
ರಾಜ್ಯ ವಿಧಾನ ಸಭೆಯಲ್ಲಿ ವಿಶ್ವಾಸ ಮತ ಯಾಚನೆಯನ್ನು ಪೂರ್ಣಗೊಳಿಸಲು ನಿರ್ದೇಶನ ನೀಡುವಂತೆ ಕೋರಿ ಇಬ್ಬರು ಸ್ವತಂತ್ರ ಶಾಸಕರಾದ ಎಚ್. ನಾಗೇಶ್ ಹಾಗೂ ಆರ್. ಶಂಕರ್ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.





