ವಿವಿಗಳ ಸಿಂಡಿಕೇಟ್ ನಾಮ ನಿರ್ದೇಶನ ರದ್ದುಪಡಿಸಲು ಬಿಜೆಪಿ ಮನವಿ

ಬೆಂಗಳೂರು, ಜು.24: ರಾಜ್ಯ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ ನೇಮಕ ಮಾಡಿರುವ ನಾಮ ನಿರ್ದೇಶನಗಳನ್ನು ರದ್ದುಪಡಿಸುವಂತೆ ಕೋರಿ ವಾಯವ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ನೇತೃತ್ವದ ನಿಯೋಗವು, ಸರಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ಗೆ ಮನವಿ ಮಾಡಿದೆ.
ರಾಜ್ಯ ಸರಕಾರವು ಜು.20ರಂದು ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಅಧಿ ನಿಯಮ 2000ರ ಅನ್ವಯಿಕೆ ಹೊಂದಿರುವ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯ ರಾಜ್ಯ ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ ಅದೇ ಅಧಿನಿಯಮದ ಪ್ರಕರಣ 28(1)(ಜಿ)ರನ್ವಯ ಸರಕಾರದಿಂದ ನಾಮ ನಿರ್ದೇಶನಗಳನ್ನು ಮಾಡಿ ಉನ್ನತ ಶಿಕ್ಷಣ ಇಲಾಖೆಯ(ವಿಶ್ವ ವಿದ್ಯಾನಿಲಯಗಳು-02) ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರವು ಅತಂತ್ರ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ರಾಜ್ಯಪಾಲರು ಸರಕಾರಕ್ಕೆ ಸಾರ್ವಜನಿಕ ಮಹತ್ವದ ಹಾಗೂ ನೇಮಕಾತಿ, ನಾಮ ನಿರ್ದೇಶನಗಳ ಕುರಿತು ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳದಂತೆ ಸೂಚಿಸಿದ ಸಂದರ್ಭದಲ್ಲಿ ಶೈಕ್ಷಣಿಕ ವಲಯದಲ್ಲಿ ಈ ರೀತಿ ತರಾತುರಿಯಲ್ಲಿ ನೇಮಕ ಮಾಡಿರುವುದು ಬೃಹತ್ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ ಎಂದು ಅವರು ಹೇಳಿದ್ದಾರೆ.
ಈ ನೇಮಕಾತಿಗಳು ಮಾಡಿರುವುದು ದುರುದ್ದೇಶ ಪೂರಿತವಾಗಿದೆ. ಕರ್ನಾಟಕ ವಿಶ್ವ ವಿದ್ಯಾಲಯ ಕಾಯ್ದೆ ರದ್ದುಗೊಳಿಸಿ ಹೊಸ ಕಾಯ್ದೆಯನ್ನು ಸಿದ್ಧಪಡಿಸಿ ಎರಡೂ ಸದನಗಳಲ್ಲಿ ಅನುಮೋದನೆಗೊಂಡು ರಾಜ್ಯಪಾಲರ ಮೇಜಿನ ಮೇಲಿದೆ. ಈ ರೀತಿ ಸಿಂಡಿಕೇಟ್ ನೇಮಕಾತಿಗಳ ಬಗ್ಗೆ ಹೊಸ ಕಾಯ್ದೆಯಲ್ಲಿ ಹಲವು ಹೊಸ ಸಂಗತಿಗಳು ಪ್ರಸ್ತಾಪಿತಗೊಂಡಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಗೊಂದಲಗಳ ಮದ್ಯೆ ಈಗ ಪತನಗೊಂಡ ಸರಕಾರ ಪತನದ ಅಂಚಿನಲ್ಲಿ ಮಾಡಿರುವ ನಾಮ ನಿರ್ದೇಶನಗಳನ್ನು ತಕ್ಷಣ ತಡೆ ಹಿಡಿದು ವಿಶ್ವ ವಿದ್ಯಾಲಯಗಳ ಅವುಗಳನ್ನು ನೋಟಿಫೈ ಮಾಡದಂತೆ ಆದೇಶಿಸಬೇಕು ಹಾಗೂ ಈ ಎಲ್ಲ ನೇಮಕಾತಿಗಳನ್ನು ರದ್ದುಗೊಳಿಸಬೇಕೆಂದು ಅರುಣ್ ಶಹಾಪುರ ಮನವಿ ಮಾಡಿದ್ದಾರೆ.







