18 ರಾಜ್ಯಗಳಲ್ಲಿ ಪ್ಲಾಸ್ಟಿಕ್ ಚೀಲಗಳಿಗೆ ಸಂಪೂರ್ಣ ನಿಷೇಧ:ಸಿಪಿಸಿಬಿ

ಹೊಸದಿಲ್ಲಿ,ಜು.24: 18 ರಾಜ್ಯಗಳು ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ಮತ್ತು ಪ್ಲಾಸ್ಟಿಕ್ ಉತ್ಪನ್ನಗಳಿಗೆ ಸಂಪೂರ್ಣ ನಿಷೇಧವನ್ನು ಹೇರಿವೆ ಮತ್ತು ಇತರ ಐದು ರಾಜ್ಯಗಳು ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಭಾಗಶಃ ನಿಷೇಧವನ್ನು ಹೇರಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಯು ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್‌ಜಿಟಿ)ಕ್ಕೆ ತಿಳಿಸಿದೆ.
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ಲಾಸ್ಟಿಕ್ ತ್ಯಾಜ್ಯ ನಿಯಮಾವಳಿಗಾಗಿ ಕ್ರಿಯಾ ಯೋಜನೆಯನ್ನು ಸಲ್ಲಿಸಿವೆ ಎಂದೂ ಅದು ಎನ್‌ಜಿಟಿ ಅಧ್ಯಕ್ಷ ನ್ಯಾ.ಎ.ಕೆ.ಗೋಯೆಲ್ ನೇತೃತ್ವದ ಪೀಠಕ್ಕೆ ತಿಳಿಸಿದೆ.
ಅಸ್ಸಾಂ, ಪುದುಚೇರಿ ಮತ್ತು ತೆಲಂಗಾಣಗಳು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳನ್ನು ನಿಷೇಧಿಸಿಲ್ಲ ಮತ್ತು ಒಡಿಶಾ ಈ ಸಂಬಂಧ ಯಾವುದೇ ವಿವರಗಳನ್ನು ಒದಗಿಸಿಲ್ಲ ಎಂದು ಅದು ಹೇಳಿದೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳು,2016ರ ಅನುಷ್ಠಾನ ಕುರಿತು ಮುಂದಿನ ಸ್ಥಿತಿಗತಿ ವರದಿಯನ್ನು ಸೆಪೆಂಬರ್ 30 ರಂದು ಸಲ್ಲಿಸುವಂತೆ ಸಿಪಿಸಿಬಿಗೆ ನಿರ್ದೇಶ ನೀಡಿರುವ ಎನ್‌ಜಿಟಿ, ಮುಂದಿನ ಕ್ರಮವನ್ನು ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಮಾವಳಿಗಳ ಉಲ್ಲಂಘನೆಗಾಗಿ ದಂಡಗಳನ್ನು ವಿಧಿಸಿವೆ ಮತ್ತು ನೋಟಿಸ್‌ಗಳನ್ನು ಹೊರಡಿಸಿವೆ,ಜೊತೆಗೆ ಮುಚ್ಚುಗಡೆೆ ನಿರ್ದೇಶಗಳನ್ನೂ ನೀಡಿವೆ ಎಂದು ಸಿಪಿಸಿಬಿ ತನ್ನ ವರದಿಯಲ್ಲಿ ತಿಳಿಸಿದೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಉಲ್ಲಂಘನೆಗಳು ನಡೆದಿಲ್ಲ. ಐದು ರಾಜ್ಯಗಳು ಈ ಸಂಬಂಧ ಮಾಹಿತಿಗಳನ್ನು ಸಲ್ಲಿಸಿಲ್ಲ. ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಮಾಹಿತಿಗಳನ್ನು ಸಲ್ಲಿಸುವಲ್ಲಿ ವಿಫಲಗೊಂಡಿವೆ ಎಂದೂ ತಿಳಿಸಿರುವ ಸಿಪಿಸಿಬಿ,ಪ್ಲಾಸ್ಟಿಕ್ ಹಾವಳಿಯನ್ನು ತಡೆಯಲು ಕೆಲವು ಕ್ರಮಗಳನ್ನು ಶಿಫಾರಸು ಮಾಡಿದೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳು,2016 ಮತ್ತು ಪ್ಲಾಸ್ಟಿಕ್ ಚೀಲಗಳ ದಪ್ಪ,ಜಾಗ್ರತ ದಳಗಳ ರಚನೆ,ಸಾರ್ವಜನಿಕ ಸ್ಥಳಗಳಲ್ಲಿಪ್ಲಾಸಿಕ್ ದಹನಕ್ಕೆ ತಡೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ತಾನು ಹೊರಡಿಸಿರುವ ನಿರ್ದೇಶಗಳ ಅನುಷ್ಠಾನವನ್ನು ಕೋರಿ ಸಿಪಿಸಿಬಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಎನ್‌ಜಿಟಿ ನಡೆಸುತ್ತಿದೆ.







