ಮಂಗಳೂರು: ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದ ಯು.ಟಿ.ಖಾದರ್

ಮಂಗಳೂರು, ಜು. 24: ರಾಜ್ಯ ಸರಕಾರದ ಸಚಿವನಾಗಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಲು ರಾಜ್ಯ ಸರಕಾರದ ಮುಖ್ಯ ಮಂತ್ರಿ, ಉಪ ಮುಖ್ಯ ಮಂತ್ರಿ ಸಮನ್ವಯ ಸಮಿತಿಯ ನಾಯಕರು ಜಿಲ್ಲೆಯ ಮತ್ತು ಕ್ಷೇತ್ರದ ಜನತೆ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ವಿಶ್ವಾಸ ಮತಕ್ಕೆ ಸೊಲಾಗಿದೆ. ಅದನ್ನು ಪ್ರಜಾಪ್ರಭುತ್ವ ನೆಲೆಯಲ್ಲಿ ಗೌರವದಿಂದ ಸ್ವೀಕರಿಸುವುದಾಗಿ ಮಾಜಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೂ 6 ಕೋಟಿ ಅನುದಾನ ರಾಜ್ಯ ಸರಕಾರದ ಮೂಲಕ ನೀಡಲಾಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಮಂಜೂರಾದ 150 ಕೋಟಿ ವಿಶೇಷ ಅನುದಾನ ಬಿಡಿಗಡೆಯಾಗಲಿದೆ. ಜಿಲ್ಲೆಯಲ್ಲಿ ಮರಳು ಮಾಫಿಯಾ ,ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಉಳಿಸಿಕೊಳ್ಳಲು ಎಲ್ಲರೊಂದಿಗೆ ಸಮನ್ವಯತೆಯೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ನೆರವಾದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಪ್ರಥಮ ಹಂತದಲ್ಲಿ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಶಾಲೆಗಳನ್ನು ಆರಂಭಿಸಲಾಗಿದೆ. ಇದಲ್ಲದೆ ಶಾಲೆ ನಡೆಸಲು ಸಾಧ್ಯವಿರುವ ಸೌಕರ್ಯ ಇರುವ ಕಡೆಗಳಲ್ಲಿ ಹೆಚ್ಚುವರಿಯಾಗಿ 5 ಕಡೆ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಮಂಗಳೂರು ವಿಧಾನ ಸಭಾ ಕ್ಷೇತವ್ರ ವ್ಯಾಪ್ತಿಯ ಬಬ್ಬು ಕಟ್ಟೆ, ಬಾಳೆಪುಣಿ ಎಚ್ ಕಲ್ಲು, ಅಂಬ್ಲ ಮೊಗರುವಿನಲ್ಲಿ ಹೆಚ್ಚುವರಿ ಮೂರು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಡೆಂಗ್ ಜ್ವರ ಪೀಡಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಯಲ್ಲಿ ಈ ಜ್ವರದ ಬಗ್ಗೆ ಜನ ಜಾಗೃತಿಗಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ, ಶಾಲೆ, ಕಾಲೇಜುಗಳಲ್ಲಿ ಕರಪತ್ರದ ಮೂಲಕ ಮಾಹಿತಿ ನೀಡಬೇಕಾಗಿದೆ. ಈ ಕೆಲಸ ಸಾಮೂಹಿಕ ಪ್ರಯತ್ನದಿಂದ ನಡೆಯಬೇಕಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
ಶಾಸಕರಿಗೆ ಬಿಜೆಪಿಯಿಂದ ಹಣದ ಆಮಿಷ ಸುಮೋಟೊ ತನಿಖೆ ನಡೆಸಲಿ
ವಿಧಾನ ಸಭೆಯಲ್ಲಿ ಮಂಡನೆಯಾದ ವಿಶ್ವಾಸ ಮತಕ್ಕೆ ಸೊಲಾಗಲು ಕಾರಣವಾದ ಶಾಸಕರಿಗೆ ನೀಡಿದೆ ಎನ್ನಲಾದ ಕೋಟ್ಯಾಂತರ ರೂ ಹಣದ ಆಮಿಷದ ಬಗ್ಗೆ ಸದನದಲ್ಲಿ ಕೋಲಾರದ ವಿಧಾನ ಸಭಾ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಸ್ವಯಂ ತೀರ್ಮಾನ ತೆಗೆದುಕೊಂಡು ತನಿಖೆ ನಡೆಯಲಿ ಸತ್ಯ ಹೊರಬರುತ್ತದೆ. ಜನತೆಗೆ ಸತ್ಯ ಸಂಗತಿ ತಿಳಿಯುತ್ತಿದೆ. ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯಬಾರದು ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಬಿಜೆಪಿ ತನ್ನ ಪಾತ್ರ ಇಲ್ಲ ಎಂದು ಹೇಳುವುದಾದರೆ ಮಹಾರಾಷ್ಟ್ರ ಸರಕಾರದ ಪೊಲೀಸರು ಇಲ್ಲಿನ ಶಾಸಕರು ತಂಗಿರುವ ಹೊಟೇಲ್‌ನಲ್ಲಿ ಹೇಗೆ ಕಾವಲು ಕಾಯುತ್ತಿದ್ದರು. ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡಬೇಕಾಗಿದೆ ಎಂದು ಖಾದರ್ ತಿಳಿಸಿದ್ದಾರೆ.
ಮಾಹಿತಿ ಹಕ್ಕು ಜನರಿಗೆ ನೀಡಿರುವ ಅಸ್ತ್ರ ಅದನ್ನು ದುರ್ಬಲಗೊಳಿಸುವ ಪ್ರಯತ್ನ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಯುಪಿಎ ಸರಕಾರ ಭೃಷ್ಟಾಚಾರ ನಿಗ್ರಹಕ್ಕೆ ಮಾಹಿತಿ ಹಕ್ಕು ಎನ್ನುವ ಅಸ್ತ್ರ ನೀಡಿತ್ತು. ಅಲ್ಲದೆ ಮಾಹಿತಿ ಹಕ್ಕು ಪ್ರಧಿಕಾರವನ್ನುರಚನೆ ಮಾಡಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಮಾಡಿಕೊಟ್ಟಿತ್ತು. ಈಗಿನ ಕೇಂದ್ರ ಸರಕಾರ ಈ ಕಾಯಿದೆಯನ್ನು ದುರ್ಬಲಗೊಳಿಸಲು ಲೋಕಸಭೆಯಲ್ಲಿ ತಿದ್ದುಪಡಿಯನ್ನು ಮಂಡಿಸಿ ಇದೀಗ ರಾಜ್ಯ ಸಭೆಯಲ್ಲಿ ಮಂಡಿಸಲು ಹೊರಟಿದೆ. ಮಾಹಿತಿ ಹಕ್ಕು ಪ್ರಾಧಿಕಾರ ಮುಂದಿನ ಹಂತದಲ್ಲಿ ಕೇಂದ್ರ ಸರಕಾರ ಅಧೀನದ ಸಂಸ್ಥೆಯಾಗಲಿದೆ. ಅಲ್ಲದೆ ಕೇಂದ್ರ ಸರಕಾರದ ಒಪ್ಪಿಗೆಯಿಲ್ಲದ ಯಾವೂದೇ ಮಾಹಿತಿಯನ್ನು ಸಾರ್ವಜನಿಕರು ಪಡೆಯಲು ಸಾಧ್ಯವಿಲ್ಲದ ರೀತಿಯಲ್ಲಿ ತಿದ್ದು ಮಾಡಲು ಹೊರಟಿದೆ. ಕೇಂದ್ರ ಸರಕಾರದ ಈ ಧೋರಣೆಯ ವಿರುದ್ಧ ಪ್ರಜ್ಞಾವಂತ ನಾಗರಿಕರು ವಿರೋಧ ವ್ಯಕ್ತ ಪಡಿಸಬೇಕಾಗಿದೆ. ಕೇಂದ್ರ ಸರಕಾರ ಈ ತಿದ್ದುಪಡಿಯನ್ನು ಕೈ ಬಿಡಬೇಕು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ ಮೊದಲಾದವರು ಉಪಸ್ಥಿರಿದ್ದರು.







