ಶ್ರೀಲಂಕಾದ ವೇಗದ ಬೌಲರ್ ನುವಾನ್ ಕುಲಸೇಕರ ನಿವೃತ್ತಿ

ಕೊಲಂಬೊ, ಜು.24: ಶ್ರೀಲಂಕಾದ ವೇಗದ ಬೌಲರ್ ನುವಾನ್ ಕುಲಸೇಕರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಚಾಮಿಂಡಾ ವಾಸ್ ಹಾಗೂ ಲಸಿತ್ ಮಾಲಿಂಗ ಬಳಿಕ ಗರಿಷ್ಠ ವಿಕೆಟ್‌ಗಳನ್ನು ಪಡೆದ ಲಂಕಾದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಯೊಂದಿಗೆ ವೃತ್ತಿಜೀವನ ಕೊನೆಗೊಳಿಸಿದರು.
2011ರ ವಿಶ್ವಕಪ್‌ನ ಮೂಲಕ ಭಾರತೀಯ ಅಭಿಮಾನಿಗಳ ಮನದಲ್ಲಿ ಕುಲಸೇಕರ ಹೆಸರು ಅಚ್ಚಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಕುಲಸೇಕರ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ಭಾರತಕ್ಕೆ 2ನೇ ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದರು.
15 ವರ್ಷಗಳ ವೃತ್ತಿಜೀವನದಲ್ಲಿ 37ರ ಹರೆಯದ ಕುಲಸೇಕರ 184 ಏಕದಿನ ಪಂದ್ಯಗಳಲ್ಲಿ ಒಟ್ಟು 199 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 58 ಟಿ-20 ಪಂದ್ಯಗಳಲ್ಲಿ ಒಟ್ಟು 66 ವಿಕೆಟ್‌ಗಳನ್ನು ಉರುಳಿಸಿದ್ದರು. ದ್ವೀಪರಾಷ್ಟ್ರದ ಪರ 21 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಅವರು ಒಟ್ಟು 48 ವಿಕೆಟ್‌ಗಳನ್ನು ಪಡೆದಿದ್ದಾರೆ.
ಜುಲೈ 2017ರಲ್ಲಿ ಹಂಬನ್‌ಟೋಟದಲ್ಲಿ ನಡೆದ ಝಿಂಬಾಬ್ವೆ ವಿರುದ್ಧ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದರು. 2018ರ ಮಾರ್ಚ್‌ನಿಂದ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಕುಲಸೇಕರ ಕಾಣಿಸಿಕೊಂಡಿಲ್ಲ.
2014ರಲ್ಲಿ ಶ್ರೀಲಂಕಾ ತಂಡ ಟಿ-20 ವಿಶ್ವಕಪ್ ಗೆಲ್ಲುವಲ್ಲಿ ಕುಲಸೇಕರ ಮಹತ್ವದ ಕಾಣಿಕೆ ನೀಡಿದ್ದರು. ಅವರು ಟೂರ್ನಿಯಲ್ಲಿ 6.42ರ ಇಕಾನಮಿ ರೇಟ್‌ನಲ್ಲಿ 6 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದರು.
ಢಾಕಾದಲ್ಲಿ ನಡೆದ ಭಾರತ ವಿರುದ್ಧ ಫೈನಲ್ ಪಂದ್ಯದ ವೇಳೆ ಕುಲಸೇಕರ 29 ರನ್‌ಗೆ 1 ವಿಕೆಟ್ ಪಡೆದಿದ್ದರು. 2009ರ ಮಾರ್ಚ್‌ನಲ್ಲಿ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಕುಲಸೇಕರ ನಂ.1 ಬೌಲರ್ ಆಗಿದ್ದರು. 2013ರಲ್ಲಿ ಆಸ್ಟ್ರೇಲಿಯ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಜೀವನಶ್ರೇಷ್ಠ ಬೌಲಿಂಗ್(5-22)ಸಂಘಟಿಸಿದ್ದರು.







