ಜಪಾನ್ ಓಪನ್: ಶ್ರೀಕಾಂತ್ಗೆ ಶಾಕ್ ನೀಡಿದ ಪ್ರಣಯ್
ಸಿಂಧು ಶುಭಾರಂಭ

ಟೋಕಿಯೊ, ಜು.24: ಭಾರತೀಯ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಎಚ್.ಎಸ್. ಪ್ರಣಯ್ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಸಿಂಧು 37 ನಿಮಿಷಗಳ ಹೋರಾಟದಲ್ಲಿ ಶ್ರೇಯಾಂಕರಹಿತ ಚೀನಾದ ಹಾನ್ ಯುವ್ ಅವರನ್ನು 21-9, 21-17 ನೇರ ಗೇಮ್‌ಗಳಿಂದ ಸೋಲಿಸಿದರು. ಎರಡನೇ ಸುತ್ತಿನಲ್ಲಿ ಜಪಾನ್‌ನ ಅಯಾ ಒಹೊರಿ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ.
ಕಳೆದ ವಾರ ಇಂಡೋನೇಶ್ಯ ಓಪನ್‌ನಲ್ಲಿ ಜಪಾನ್‌ನ ಇನ್ನೋರ್ವ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಸೋಲನುಭವಿಸಿದ್ದ ಸಿಂಧು ಈ ವರ್ಷ ಮೊದಲ ಪ್ರಶಸ್ತಿ ಗೆಲ್ಲುವುದರಿಂದ ವಂಚಿತರಾಗಿದ್ದರು.
*ಕಳಪೆ ಪ್ರದರ್ಶನ ಮುಂದುವರಿಸಿದ ಶ್ರೀಕಾಂತ್:
ಭಾರತದ ಶಟ್ಲರ್ ಕಿಡಂಬಿ ಶ್ರೀಕಾಂತ್ ಈ ವರ್ಷ ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಹ ಆಟಗಾರ ಎಚ್.ಎಸ್ . ಪ್ರಣಯ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಇಲ್ಲಿ ಬುಧವಾರ ನಡೆದ 750,000 ಯುಎಸ್ ಡಾಲರ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ ್ಸನ ಮೊದಲ ಸುತ್ತಿನಲ್ಲಿ ಪ್ರಣಯ್ ಅವರು 8ನೇ ಶ್ರೇಯಾಂಕದ ಶ್ರೀಕಾಂತ್ ವಿರುದ್ಧ 13-21, 21-11, 22-20 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.
ಒಂದು ಗಂಟೆ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್ ಮೊದಲ ಗೇಮ್‌ನ್ನು 21-13 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು. ಆದರೆ, ಇನ್ನೆರಡು ಗೇಮ್‌ಗಳಲ್ಲಿ ಪ್ರಣಯ್ ಮೇಲುಗೈ ಸಾಧಿಸಿದರು.
ಬುಧವಾರದ ಪಂದ್ಯಕ್ಕಿಂತ ಮೊದಲು ಪ್ರಣಯ್-ಶ್ರೀಕಾಂತ್ ಐದು ಬಾರಿ ಮುಖಾಮುಖಿಯಾಗಿದ್ದರು. ಶ್ರೀಕಾಂತ್ ನಾಲ್ಕು ಬಾರಿ ವಿಜಯಿಯಾಗಿದ್ದರು.
ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ ಇಂಡೋನೇಶ್ಯ ಓಪನ್‌ನಲ್ಲಿ 39 ನಿಮಿಷಗಳ ಕಾಲ ನಡೆದಿದ್ದ ಎರಡನೇ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ಕಾ ಲಾಂಗ್ ಅಂಗುಸ್ ವಿರುದ್ಧ 17-21, 19-21 ಗೇಮ್‌ಗಳ ಅಂತರದಿಂದ ಸೋತಿದ್ದರು.
ಪುರುಷರ ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಸಮೀರ್ ವರ್ಮಾ ನಿರಾಸೆ ಅನುಭವಿಸಿದರು. 46 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್‌ನ ಅಂಡೆರ್ಸ್ ಅಂಟೊನ್‌ಸೆನ್ ವಿರುದ್ಧ 17-21, 12-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಇದೇ ವೇಳೆ ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಜೋಡಿ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಮೊದಲ ಪಂದ್ಯದಲ್ಲಿ ಸೋಲನುಭವಿಸಿ ಟೂರ್ನಮೆಂಟ್‌ನಲ್ಲಿ ಹೊರ ನಡೆದಿದ್ದಾರೆ. 30 ನಿಮಿಷದೊಳಗೆ ಕೊನೆಗೊಂಡ ಪಂದ್ಯದಲ್ಲಿ ಚೀನಾದ ಜೋಡಿ ಝೆಂಡ್ ಸಿ ವೀ ಹಾಗೂ ಹ್ವಾಂಗ್ ಯಾ ಕಿಯಾಂಗ್ ವಿರುದ್ಧ 11-21, 14-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.







